ಜಿಲ್ಲೆ

ನ್ಯಾಯಾಧೀಶರಾಗಲು ಕಠಿಣ ಪರಿಶ್ರಮ ಅಗತ್ಯ: ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ ಸಲಹೆ

ಮೈಸೂರು: ನ್ಯಾಯಾಧೀಶರಾಗುವುದು ಒಂದು ತಪಸ್ಸು ಇದ್ದಂತೆ. ಅದನ್ನು ಸಾಕಾರಗೊಳಿಸಲು ಕಠಿಣ ಪರಿಶ್ರಮ ಅಗತ್ಯ ಎಂದು ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ ಸಲಹೆ ನೀಡಿದರು.
ಮೈಸೂರು ಜಿಲ್ಲಾ ವಕೀಲರ ಸಂಘ, ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆಯಿಂದ ಸಿವಿಲ್ ನ್ಯಾಯಾಧೀಶರ ಹುದ್ದೆಯ ಪರೀಕ್ಷೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ಒಂದು ವಾರ ನಗರದಲ್ಲಿ ಆಯೋಜಿಸಿರುವ ಉಚಿತ ತರಬೇತಿ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಸಿವಿಲ್, ಜಿಲ್ಲಾ ನ್ಯಾಯಾಧೀಶರಾಗುವುದು, ಹೈಕೋರ್ಟ್ ನ್ಯಾಯಮೂರ್ತಿಗಳಾಗುವುದು ಒಂದು ತಪಸ್ಸು. ಆ ತಪಸ್ಸು ಸಾಕಾರವಾಗಬೇಕಾದರೆ ಕಠಿಣ ಪರಿಶ್ರಮ ಅಗತ್ಯ. ಲಾಗೈಡ್ ವೆಂಕಟೇಶ್ ಹಾಗೂ ಜಿಲ್ಲಾ ವಕೀಲರ ಸಂಘ ಸಾಕಷ್ಟು ಶ್ರಮವಹಿಸಿ ಉತ್ಸಾಹದಿಂದ ಶಿಬಿರ ಆಯೋಜಿಸಿದ್ದಾರೆ. ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ ಅವರು, ನ್ಯಾಯಾಧೀಶನಾಗಲು ನಾನು ಯಾವ ರೀತಿ ಅಭ್ಯಾಸ ನಡೆಸುತ್ತಿದ್ದೆ ಎಂಬುದನ್ನು ಅಭ್ಯರ್ಥಿಗಳಿಗೆ ವಿವರಿಸಿದರು.
ಇದೇ ವೇಳೆ ಲಾಗೈಡ್ ಬಳಗದಿಂದ ಅಭ್ಯರ್ಥಿಗಳಿಗೆ ಉಚಿತವಾಗಿ ಅಧ್ಯಯನ ಸಾಮಗ್ರಿ ವಿತರಿಸಲಾಯಿತು. ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಪುಟ್ಟಸ್ವಾಮಿ, ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕರಾದ ಹಿರಿಯ ವಕೀಲ ಎಚ್.ಎನ್.ವೆಂಕಟೇಶ್, ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇವಸ್ವಾಮಿ, ಉಪಾಧ್ಯಕ್ಷ ಪುಟ್ಟಸಿದ್ದೇಗೌಡ ಇತರರು ಇದ್ದರು.