ಮುದ್ದೇಬಿಹಾಳ: ಪುರಸಭೆಯವರು ವಿನಾಕಾರಣ ಕಿರುಕುಳ ಕೊಡುತ್ತಿದ್ದು ವ್ಯಾಪಾರದ ಸಾಮಗ್ರಿ ಕಸಿದುಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೀದಿಬದಿ ವ್ಯಾಪಾರಸ್ಥರು ಶುಕ್ರವಾರ ಇಲ್ಲಿನ ಗ್ರೇಡ್-2 ತಹಸೀಲ್ದಾರ್ ಎಸ್.ಎಚ್.ಮೆಳ್ಳಿಗೇರಿ ಅವರಿಗೆ ಮನವಿ ಸಲ್ಲಿಸಿದರು.
ಬೀದಿಬದಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಕಾರ್ಯದರ್ಶಿ ಮಹಿಬೂಬ ಜಾಗಿರದಾರ, ಮುದ್ದೇಬಿಹಾಳ ತಾಲೂಕು ಘಟಕದ ಅಧ್ಯಕ್ಷ ಮಹಿಬೂಬ ಕುಳಗೇರಿ, ಮುಖಂಡ ಎಸ್.ಎಚ್.ವಿಜಯಕರ ಮಾತನಾಡಿ, ತರಕಾರಿ, ಹಣ್ಣು, ಹೂವು ಇನ್ನಿತರ ದಿನಬಳಕೆ ಸಾಮಗ್ರಿ ವ್ಯಾಪಾರ ಮಾಡಲಾಗುತ್ತಿದೆ.
ಈಚೆಗೆ ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಅಧ್ಯಕ್ಷತೆಯಲ್ಲಿ ನಡೆದ ಬೀದಿಬದಿ ವ್ಯಾಪಾರಸ್ಥರ ಸಭೆಯಲ್ಲಿ ದೀಪಾವಳಿವರೆಗೂ ಬೀದಿಬದಿ ವ್ಯಾಪಾರ ನಡೆಸಲು ಅವಕಾಶ ನೀಡಲಾಗಿದೆ. ದೀಪಾವಳಿ ನಂತರ ಪುರಸಭೆ ಹೊರಡಿಸುವ ನಿಯಮಗಳನ್ನು ಪಾಲಿಸುವಂತೆ ತಿಳಿಸಲಾಗಿತ್ತು. ಅದನ್ನು ಎಲ್ಲರೂ ಒಪ್ಪಿಕೊಂಡು ನಿಯಮಗಳ ಅನುಸಾರವೇ ವ್ಯಾಪಾರ ಮಾಡುತ್ತಿದ್ದೇವೆ. ಹೀಗಿದ್ದರೂ ಪುರಸಭೆ ಸಿಬ್ಬಂದಿ ಕಿರುಕುಳ ಕೊಡುತ್ತಿರುವುದು ಬಡವರ ಹೊಟ್ಟೆ ಮೇಲೆ ಹೊಡೆದಂತಾಗಿದೆ.
ತಕ್ಷಣ ಕಿರುಕುಳ ನಿಲ್ಲಿಸಬೇಕು. ಇದೇ ರೀತಿ ಅನ್ಯಾಯ ಮುಂದುವರಿದಲ್ಲಿ ತಹಸೀಲ್ದಾರ್, ಪುರಸಭೆ ಕಾರ್ಯಾಲಯಗಳ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದರು.
ಸಂಘದ ಪದಾಧಿಕಾರಿಗಳಾದ ನೂರಅಹ್ಮದ್ ಸಣ್ಣಕ್ಕಿ, ಆಸ್ೀ ನೀಡಗುಂದಿ, ರಜಾಕ್ ಕಲಾದಗಿ, ಬಾಬಾಜಾನ್ ಮಮದಾಪುರ, ಕಾಲೀಮಾ ಬೀಳಗಿ, ಬಾಳವ್ವ ಅಂಬಿಗೇರ, ಸಮೀರ್ ಹುಣಚಗಿ, ನಿಂಗಪ್ಪ ಚಲವಾದಿ, ದಸ್ತಗೀರ ಬಾಗವಾನ, ಜಾರ್ ಮುಜಾವಾರ, ಸಂತೋಷ ಚವ್ಹಾಣ ಇತರರಿದ್ದರು.