ಜಿಲ್ಲೆ

ಬಾಲಕಿಯರಿಗೆ ಕಿರುಕುಳ, ಕರ್ತವ್ಯ ಲೋಪದ ಆರೋಪ: ಅಧೀಕ್ಷಕಿ, ಸಹಾಯಕಿ ವಿರುದ್ಧ ಪ್ರಕರಣ ದಾಖಲು

ಚಿಕ್ಕಬಳ್ಳಾಪುರ: ಕರ್ತವ್ಯ ಲೋಪ ಮತ್ತು ಮಕ್ಕಳ ಮೇಲಿನ ಹಲ್ಲೆಯ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರಿ ಬಾಲಕಿಯರ ಬಾಲಮಂದಿರದ ಕೇಂದ್ರದ ಅಧೀಕ್ಷಕಿ ಮತ್ತು ಸಹಾಯಕಿಯ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಕೇಂದ್ರ ಅಧೀಕ್ಷಕಿ ಮಮತ ಮತ್ತು ಸಹಾಯಕಿ ಸರಸ್ವತಮ್ಮ ಆರೋಪಿಗಳು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ನ್ಯಾಯಾಧೀಶರ ಭೇಟಿ ವೇಳೆ ಪತ್ತೆ
ಇತ್ತೀಚೆಗೆ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪ ಬಾಲಮಂದಿರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಕ್ಕಳು ಅಳಲು ತೋಡಿಕೊಂಡಿದ್ದರು. ಅವಾಚ್ಯ ಶಬ್ದಗಳಿಂದ ನಿಂದನೆ, ಕೋಲಿನಿಂದ ಹೊಡೆಯುವುದು ಸೇರಿದಂತೆ ನಾನಾ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಇದೇ ವೇಳೆ ಕೇಂದ್ರದಲ್ಲಿ ಗುಣಮಟ್ಟವಿಲ್ಲದ ಆಹಾರ ಪೂರೈಕೆ, ಪದಾರ್ಥಗಳ ಹುಳುಗಳಿರುವುದು ಪತ್ತೆಯಾಗಿತ್ತು. ಇದಕ್ಕೆ ನ್ಯಾಯಾಧೀಶರು ಜಿಲ್ಲಾಡಳಿತಕ್ಕೆ ಪತ್ರ ಬರೆದು, ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಇದರಿಂದ ಅಧೀಕ್ಷಕಿ ಮತ್ತು ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ನೋಟಿಸ್ ನೀಡಿದ್ದು ಅಧಿಕಾರಿಗಳ ತನಿಖೆಯಲ್ಲಿ ಬಾಲಮಂದಿರದಲ್ಲಿ ಬಳಕೆಯ ಆಹಾರ ಪದಾರ್ಥಗಳನ್ನು ಪರಿಶೀಲಿಸಿದಾಗ ಗುಣಮಟ್ಟವಿಲ್ಲದಿರುವುದು ಖಾತ್ರಿಯಾಗಿದೆ.