ಪಾಂಡವಪುರ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ. ದುರ್ಬಳಕೆ ಹಿನ್ನೆಲೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಂಘದ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿ ನೌಕರರನ್ನು ತರಾಟೆಗೆ ತೆಗೆದುಕೊಂಡರು.  
ಜಿಲ್ಲೆ

ಪಿಎಸಿಎಸ್ ನೌಕರರು, ಲೆಕ್ಕಪರಿಶೋಧಕರಿಗೆ ತರಾಟೆ

ಮಾದೇಶ್ ತಿ.ನರಸೀಪುರ

ಪಾಂಡವಪುರ: ಪಟ್ಟಣದ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ. ದುರ್ಬಳಕೆ ಮತ್ತು ಷೇರುದಾರರ ಚಿನ್ನಾಭರಣ ದುರುಪಯೋಗ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಮಂಗಳವಾರ ಸಂಘದ ಕಚೇರಿಗೆ ಭೇಟಿ ನೀಡಿ ನೌಕರ ವರ್ಗ ಹಾಗೂ ಲೆಕ್ಕ ಪರಿಶೋಧಕರನ್ನು ತರಾಟೆಗೆ ತೆಗೆದುಕೊಂಡು ಕಾನೂನು ಕ್ರಮದ ಎಚ್ಚರಿಕೆ ನೀಡಿದರು.


ಸಂಘದ ಕಚೇರಿಗೆ ಮಧ್ಯಾಹ್ನ 3.30 ಕ್ಕೆ ಭೇಟಿ ನೀಡಿದ ಶಾಸಕರು, ರಾತ್ರಿ 8ರವರೆಗೆ ಕಚೇರಿಯಲ್ಲೇ ಕುಳಿತು ಸಂಘಕ್ಕೆ ಸಂಬಂಧಿಸಿದ ಷೇರುದಾರರ ಪಿಗ್ಮಿ ಹಣ, ಠೇವಣಿ ಹಣ, ಚಿನ್ನಾಭರಣಗಳಿಗೆ ಸಂಬಂಧಿಸಿದಂತೆ ಎಲ್ಲ ಲೆಕ್ಕ ಪುಸ್ತಕಗಳನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಪರಿಶೀಲನೆ ನಡೆಸಿದರು. ಜತೆಗೆ ಲೆಕ್ಕಪರಿಶೋಧಕರು 2023-24 ರವರೆಗೆ ನೀಡಿದ ಆಡಿಟ್ ವರದಿಯನ್ನು ಪರಿಶೀಲಿಸಿ ಮೇಲ್ನೋಟಕ್ಕೆ ಕಂಡು ಬಂದ ಹಣ ದುರ್ಬಳಕೆಯ ಲೆಕ್ಕಚಾರವನ್ನು ನೋಟ್ ಮಾಡಿಕೊಂಡರು.


ಸಂಘದ ಆಡಳಿತ ಮಂಡಳಿ ಈ ಹಿಂದೆ ಇದ್ದ ಮುಖ್ಯ ಕಾರ್ಯನಿರ್ವಣಾಧಿಕಾರಿ ಸಂದೇಶ್ ಅವರನ್ನು ಬದಲಾಯಿಸಿ ಸಂಘದ ಕ್ಯಾಷಿಯರ್ ಆಗಿದ್ದ ಕಿರಣ್ ಅವರನ್ನು ನೂತನ ಸಿಇಒ ಆಗಿ ನೇಮಕ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಂಘಕ್ಕೆ ಸಂಬಂಧಿಸಿದ ಎಲ್ಲ ದಾಖಲೆ, ಲೆಕ್ಕಾಚಾರ ಮತ್ತು ಬ್ಯಾಂಕ್ ಪುಸ್ತಕ ನೀಡುವಂತೆ ತಾಕೀತು ಮಾಡಿದರು. ಈ ವೇಳೆ ಸಂಘದ ಪ್ರಮುಖ ಪಾಸ್ ಪುಸ್ತಕ ಮತ್ತು ಕೆಲವೊಂದು ದಾಖಲೆಗಳು, ಹಿಂದಿನ ಕಾರ್ಯನಿರ್ವಹಣಾಧಿಕಾರಿ ಬಳಿಯೇ ಇರುವುದಾಗಿ ತಿಳಿಸಿದ್ದರಿಂದ ನೌಕರರ ಬೇಜವಾಬ್ದಾರಿ ನಡೆಗೆ ಕೆಂಡಾಮಂಡಲವಾದರು.


ಕಚೇರಿಗೆ ಬಾರದ ಹಿಂದಿನ ಸಿಇಒ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಹಿಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ತಕ್ಷಣ ಕರೆಸಿ ಸಂಘದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಅಗತ್ಯ ದಾಖಲೆಗಳನ್ನು ಒಪ್ಪಿಸಲು ತಾಕೀತು ಮಾಡಿದರು. ಈ ವೇಳೆ ಸಂಘದ ಇತರ ನೌಕರರು ಹಲವು ಬಾರಿ ದೂರವಾಣಿ ಕರೆ ಮಾಡಿ ಕಚೇರಿಗೆ ಬರುವಂತೆ ಕೇಳಿಕೊಂಡರೂ ಹಿಂದಿನ ಸಿಇಒ ಕಚೇರಿಗೆ ಬರಲಿಲ್ಲ. ಇದರಿಂದ ಬೇಸರಗೊಂಡ ಶಾಸಕರು, ಅವರಿಂದ ಎಲ್ಲ ದಾಖಲೆ ಪುಸ್ತಕಗಳನ್ನು ಪಡೆದುಕೊಂಡ ಬಳಿಕ ಬೇಜವಾಬ್ದಾರಿ ಸಿಇಒ ಅವರನ್ನು ಕೆಲಸದಿಂದ ವಜಾಗೊಳಿಸುವಂತೆ ಸಂಘದ ಅಧ್ಯಕ್ಷರಿಗೆ ಸೂಚಿಸಿದರು.


ಲೆಕ್ಕಪರಿಶೋಧಕರಿಗೆ ತರಾಟೆ: ಕೃಷಿ ಪತ್ತಿನ ಸಹಕಾರ ಸಂಘದ ಲೆಕ್ಕ ಪರಿಶೋಧನೆ ನಡೆಸುತ್ತಿರುವ ಪ್ರವೀಣ್ ಮತ್ತು ಅವರ ಸಹಾಯಕ ಫಿಲೋಮಿನಾ ರಾಜ್ ವಿರುದ್ಧ ಬೇಸರ ವ್ಯಕ್ತಪಡಿಸಿದ ಶಾಸಕರು, ನಿಮ್ಮ ಕೆಲಸ ದಾಖಲೆಗಳನ್ನು ನೋಡಿಕೊಂಡು ಆಡಿಟ್ ವರದಿ ಮಾಡುವುದು. ನೀವು ಯಾವ ಆಧಾರದ ಮೇಲೆ ಈ ರೀತಿ ತಪ್ಪು ಲೆಕ್ಕ ಪರಿಶೋಧನೆ ಮಾಡಿದ್ದೀರಿ. ಸಂಘದಲ್ಲಿ ನಡೆದಿರುವ ಎಲ್ಲ ಅವ್ಯವಹಾರಗಳಿಗೂ ನೀವೇ ಜವಾಬ್ದಾರರು. ಸಂಘದ ಖಾತೆಯಲ್ಲಿ ಮೂರು ಕೋಟಿ ರೂ.ಇದೆ ಎಂದು ಆಡಿಟ್ ವರದಿಯಲ್ಲಿ ನಮೂದಿಸಲಾಗಿದೆ. ಈ ಹಣ ಎಲ್ಲಿದೆ ಎಂದು ತೋರಿಸಿ. ಬ್ಯಾಂಕ್ ಪುಸ್ತಕದ ಬ್ಯಾಲೆನ್ಸ್ ಪರಿಶೀಲನೆ ಮಾಡಿದ್ದೀರಾ? ಈ ರೀತಿ ಕೆಲಸ ಮಾಡಲು ನಾಚಿಕೆ ಆಗಲ್ವ? ನಿಮ್ಮ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಆಡಿಟರ್ ಫಿಲೋಮಿನಾ ರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸ್ಥಳದಲ್ಲಿದ್ದ ಷೇರುದಾರರೂ ಆಡಿಟರ್ ಲಂಚ ತಿಂದು ಈ ರೀತಿಯ ಕೆಲಸ ಮಾಡಿದ್ದಾರೆ. ಹಣ ದುರ್ಬಳಕೆಯಾಗಲು ಇವರೇ ಕಾರಣ. ಇವರಿಂದಲೇ ಹಣ ವಸೂಲಿ ಮಾಡಬೇಕು ಕಿಡಿಕಾರಿದರು.


ಅ.18 ರೊಳಗೆ ಲೆಕ್ಕ ಚುಕ್ತಾ ಆಗಬೇಕು: ಸಂಘದಲ್ಲಿ ನಡೆದಿರುವ ಹಣ ಮತ್ತು ಚಿನ್ನಾಭರಣಗಳ ದುರುಪಯೋಗಕ್ಕೆ ಸಂಬಂಧಿಸಿದಂತೆ ಅ.18 ರೊಳಗೆ ಎಲ್ಲವೂ ಸರಿಯಾಬೇಕು. ಹಿಂದಿನ ಮತ್ತು ಈಗಿನ ಸಿಇಒಗಳು ಜವಾಬ್ದಾರಿಯಿಂದ ನಡೆದುಕೊಂಡು ಸಹಕಾರ ಸಂಘ ಉಳಿಸಬೇಕು. ಅ.18 ರಂದು ಕಚೇರಿಗೆ ಬರುತ್ತೇನೆ. ಅಂದು ಈ ಎಲ್ಲ ಲೆಕ್ಕಾಚಾರಗಳು ಚುಕ್ತಾ ಆಗಬೇಕು ಎಂದು ಖಡಕ್ ಸೂಚನೆ ನೀಡಿದರು.


ಸಂಘದ ಅಧ್ಯಕ್ಷ ಬಲರಾಮು, ನಿರ್ದೇಶಕರಾದ ಬೇವಿನಕುಪ್ಪೆ ಯೋಗೇಶ್, ಮಿಲ್ ಸಂತೋಷ್, ಪುರಸಭೆ ಮಾಜಿ ಅಧ್ಯಕ್ಷ ಸತೀಶ್, ಷೇರುದಾರರಾದ ಹಾರೋಹಳ್ಳಿ ಜನಾದರ್ನ, ಪರಮೇಶ್ ಇತರರು ಇದ್ದರು.