ಹರಪನಹಳ್ಳಿ: ವಡ್ಡಿನ ದಾದಾಪುರ ಗ್ರಾಮಕ್ಕೆ ಸಮರ್ಪಕ ಬಸ್ ಸೌಲಭ್ಯವಿಲ್ಲದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಿಂದ ಸುಮಾರು 70 ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹರಪನಹಳ್ಳಿ, ಬಂಡ್ರಿ, ಕೂಲ್ಲಹಳ್ಳಿಗೆ ತೆರಳುತ್ತಿದ್ದಾರೆ. ಆದರೆ ಗ್ರಾಮದಿಂದ ಸೂಕ್ತ ಬಸ್ ಸೌಲಭ್ಯ ಇಲ್ಲದಿದ್ದರಿಂದ ವಿದ್ಯಾರ್ಥಿಗಳು ನಿತ್ಯ ಆಟೋದಲ್ಲಿ ಹೋಗುವ ಪರಿಸ್ಥಿತಿ ಎದುರಾಗಿದೆ. ಗ್ರಾಮದ ಮಾರ್ಗದಲ್ಲಿ ದಿನಕ್ಕೆ ಒಂದೇ ಬಸ್ ಬರುತ್ತದೆ. ಅದು ಹೂವಿನಹಡಗಲಿ ತಾಲೂಕಿನಿಂದ ಮಾಗಳ ಮಾರ್ಗವಾಗಿ ಹಿರೇಹಡಗಲಿ, ಕೊಳಚಿ ತಮಲಾಪುರ, ಕೆ.ಕೆ.ತಾಂಡಾ, ಮಾಡಲಗೇರಿ ಮೂಲಕ ವಡ್ಡಿನ ದಾದಾಪುರಕ್ಕೆ ಬರುತ್ತದೆ.
ಗ್ರಾಮಕ್ಕೆ ಬರುವ ಮುನ್ನವೇ ಬಸ್ ಭರ್ತಿಯಾಗುತ್ತಿರುವದರಿಂದ ಬಸ್ ನಿಲ್ಲಿಸುತ್ತಿಲ್ಲ. ಇದರಿಂದ ನಿತ್ಯ ಆಟೋದಲ್ಲೇ ಹೋಗಬೇಕಿದ್ದು, ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗುತ್ತಿದೆ. ಬಸ್ ಸೌಲಭ್ಯಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
=============
ಕೋಟ್
ವಡ್ಡಿನ ದಾದಾಪುರ ಗ್ರಾಮಕ್ಕೆ ಸೂಕ್ತ ಬಸ್ ಸೌಲಭ್ಯ ಇಲ್ಲದಿದ್ದರಿಂದ ವಿದ್ಯಾರ್ಥಿಗಳು ಆಟೋದಲ್ಲಿ ಸಂಚರಿಸುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಬೇಕು.
ವೀರೇಶ್ ವಡ್ಡಿನ
ಗ್ರಾಮಸ್ಥ, ವಡ್ಡಿನ ದಾದಾಪುರ
============
ಕೋಟ್
ವಡ್ಡಿನ ದಾದಪುರ ಗ್ರಾಮಕ್ಕೆ ಈಗಾಗಲೇ ಒಂದು ಬಸ್ ಬಿಡಲಾಗಿದೆ. ಗ್ರಾಮದ ರಸ್ತೆಯ ಬದಿ ರೈತರು ಒಕ್ಕಲುತನ ಮಾಡುತ್ತಿದ್ದಾರೆ. ಬಸ್ ಸಂಚರಿಸಲು ಅನುಕೂಲ ಮಾಡಿಕೊಡುವಂತೆ ಕೇಳಿದ ಚಾಲಕನಿಗೆ ರೈತರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹೀಗಾದರೆ ಬಸ್‌ಗಳು ಸಂಚರಿಸಲು ಸಾಧ್ಯವಾಗುವುದಿಲ್ಲ. ರೈತರು ರಸ್ತೆ ಬದಿಯಲ್ಲಿ ಒಕ್ಕಲುತನ ಮಾಡದೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಸಹಕರಿಸಬೇಕು.
ಮಂಜುಳಾ
ಡಿಪೋ ವ್ಯವಸ್ಥಾಪಕಿ, ಹರಪನಹಳ್ಳಿ