ಹರಪನಹಳ್ಳಿ: ಹೋರಾಟ ನಡೆಸುವವರೆಗೆ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ದೊರಕುವುದಿಲ್ಲವೆಂದು ಎಐಟಿಯುಸಿ ರಾಜ್ಯಾಧ್ಯಕ್ಷ ಎಚ್.ಜಿ. ಉಮೇಶ್ ತಿಳಿಸಿದರು.
ಉಚ್ಚಂಗಿದುರ್ಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಐಟಿಯುಸಿ 4ನೇ ತಾಲೂಕು ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂಘಟನೆಗಳು ಬಲವರ್ಧನೆಗೊಳ್ಳಲು ಕಟ್ಟಡ ಕಾರ್ಮಿಕರ ಹೋರಾಟ ಕಾರಣ.
1998 ರಲ್ಲಿ ಕಾರ್ಮಿಕರಿಗೆ ಸರ್ಕಾರಗಳು ಯಾವುದೇ ರೀತಿಯ ಭದ್ರತೆಯನ್ನು ನೀಡಿರಲಿಲ್ಲ. ಕಟ್ಟಡ ಕಾರ್ಮಿಕರ ಹೋರಾಟದ ಫಲವಾಗಿ ಕಾರ್ಮಿಕ ಮಂಡಳಿ ರಚನೆಯಾಗಿದೆ ಎಂದು ತಿಳಿಸಿದರು.
ತಾಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಯಾಗಿದೆ. ಆದರೆ, ಆರೋಗ್ಯ ತಪಾಸಣೆ ಮತ್ತು ಕಿಟ್ ವಿತರಣೆ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ದೋಚುವ ಕೆಲಸವನ್ನು ಸಂಬಂಧಿಸಿದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಮಾಡುತ್ತಿದ್ದಾರೆ.
ನಮ್ಮ ಹಕ್ಕುಗಳು ಮತ್ತು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಎಲ್ಲರೂ ಒಗ್ಗಟ್ಟಿನಿಂದ ಬೀದಿಗಿಳಿಯುವ ಕಾಲ ಸನ್ನಿಹಿತವಾಗಿದೆ ಎಂದರು.
ಸಂಘಟನೆ ತಾಲೂಕು ಉಸ್ತುವಾರಿ ಎಚ್.ಎಂ. ಸಂತೋಷ್ ಮಾತನಾಡಿ, ಸಮಾವೇಶ ತಾಲೂಕು ಕೇಂದ್ರಕ್ಕೆ ಸೀಮಿತವಾಗಿದೆ, ರಾಜ್ಯದ ಉದ್ದಗಲಕ್ಕೂ ಪಸರಿಸಬೇಕು. ಒಗ್ಗಟ್ಟಾಗಿ ಮೂಲಸೌಕರ್ಯ ಪಡೆದುಕೊಳ್ಳಬೇಕು ಎಂದರು. ಪ್ರಮುಖರಾದ ಹೊಸಳ್ಳಿ ಮಲ್ಲೇಶ್, ಹಲಗಿ ಸುರೇಶ, ಬಳಿಗನೂರು ಕೊಟ್ರೇಶ, ಟಿ ರಾಮಜ್ಜ, ಬಸಮ್ಮ, ಕೋಟೆಪ್ಪ, ರಂಗಪ್ಪ, ಚೌಡಪ್ಪ, ಹಾಲೇಶಪ್ಪ, ಜಕಣಾಚಾರಿ, ಕಾರ್ಮಿಕರು ಇದ್ದರು.