ಜಿಲ್ಲೆ

ವಿಶಿಷ್ಟ ವಚನ ರಚಿಸಿದ 12ನೇ ಶತಮಾನದ ಅಲ್ಲಮಪ್ರಭು

ಹರಪನಹಳ್ಳಿ: ಅಲ್ಲಮಪ್ರಭು ಅವರ 21ಸಾವಿರ ವಚನಗಳಿದ್ದು, ಅವು ವಿಶಿಷ್ಟ ಹಾಗೂ ಔಚಿತ್ಯ ಪೂರ್ಣವಾಗಿವೆ ಎಂದು ಪಾಂಡೋಮಟ್ಟಿ ಕಮ್ಮತ್ತಹಳ್ಳಿ ವೀರಕ್ತಮಠದ ಡಾ.ಗುರುಬಸವ ಮಹಾಸ್ವಾಮಿಜಿ ಅಭಿಪ್ರಾಯಪಟ್ಟರು.

ತಾಲೂಕಿನ ಕಮ್ಮತ್ತಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಅಲ್ಲಮಪ್ರಭು ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಡಿದರು. ಬಸವಣ್ಣನವರ ವಚನಗಳು ಭಕ್ತಿಗೆ ವಿಶೇಷವಾದ ಸ್ಥಾನ ನೀಡಿದ್ದು, ಜನ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿವೆ. ಆಧ್ಯಾತ್ಮಿಕ ವಿಚಾರದಲ್ಲಿ ಪದವಿ ಹಾಗೂ ಪಿಎಚ್.ಡಿ ಮಾಡಿದಂತಹ ವ್ಯಕ್ತಿಗಳಿಗೆ ಅರ್ಥವಾಗುವ ವಚನಗಳಾಗಿವೆ ಎಂದರು.

ಶರಣರ ಚಿಂತನೆಗಳು ಸಮಾಜಮುಖಿಯಾಗಿದ್ದು, ಜೀವಪರವಾಗಿವೆ. ಆಧ್ಯಾತ್ಮಿಕ ವಿಚಾರದಲ್ಲಿ ಪರಿಣಿತಿ ಹೊಂದಿದವರಿಗೆ ಮಾತ್ರ ಅರ್ಥವಾಗುತ್ತವೆ. ಅಂತಹ ವಚನಗಳು ಜನ ಸಾಮಾನ್ಯರಿಗೆ ಅರ್ಥವಾಗಬೇಕೆಂದರೆ ಇಂತಹ ಜಯಂತಿ ನಡೆಯಬೇಕು ಎಂದರು.

ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ಮೌಢ್ಯಗಳನ್ನು ತೊಲಗಿಸಬೇಕು. ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಶರಣರ ವಚನಗಳಿಗೆ ಮನುಷ್ಯನನ್ನು ಬದಲಾವಣೆ ಮಾಡುವಂತಹ ಶಕ್ತಿ ಇದೆ. ಆದರೆ, ಅವುಗಳನ್ನು ಪಾಲನೆ ಮಾಡುವಲ್ಲಿ ದಾರಿತಪ್ಪಿದ್ದೇವೆ. ಮೌಢ್ಯ ಆಚರಣೆ ಮಾಡದೆ ವೈಜ್ಞಾನಿಕ ಸಂಶೋಧನೆ, ಪ್ರಶ್ನೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು. ನಂತರ ಪವಾಡ ಬಯಲು ಕಾರ್ಯಕ್ರಮ ನಡೆಸಿಕೊಟ್ಟರು.

ಚಿಕ್ಕಮಗಳೂರು ಕಸಾಪ ಅಧ್ಯಕ್ಷ ರವೀಶ ಕ್ಯಾತನಬೀಡು ಮಾತನಾಡಿದರು. ಪ್ರಮುಖರಾದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಡಾ.ಮಲ್ಲೇಶ್, ರಾಜೇಂದ್ರ, ಪರಮೇಶ್ವರಪ್ಪ, ಬಿ. ಕೆಂಚನಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ ನಾರನಗೌಡ, ತಳಕಲ್ ರೇವಮ್ಮ ಬಸಪ್ಪ, ಬಸವ ಬಳಗ ಭಜನಾ ಸಂಘದವರು ಇದ್ದರು.