ಹರಪನಹಳ್ಳಿ: ಪಂಚಮಸಾಲಿ ಮೀಸಲು ಹೋರಾಟಕ್ಕೆ ನಮ್ಮ ಬೆಂಬಲವಿದೆ. ಅದರ ಜೊತೆಗೆ ನಮ್ಮ ಒಬಿಸಿ ಮೀಸಲು ಹೋರಾಟ ಅವರಿಗೆ ಪೂರಕವಾಗಿದೆ ಎಂದು ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಪಂಚಮಸಾಲಿ ಹೋರಾಟದ ಪಾದಯಾತ್ರೆಗೆ ನಮ್ಮ ಶಾಖಾ ಮಠದ ಸ್ವಾಮೀಜಿಗಳನ್ನು ಕಳಿಸಿದ್ದೇವೆ. ನಮ್ಮ ಹೋರಾಟವು ಪಂಚಮಸಾಲಿ ಹೋರಾಟಕ್ಕೆ ಕೌಂಟರ್ ಅಲ್ಲ. ವೀರಶೈವ ಲಿಂಗಾಯತರ ಮೀಸಲಾತಿ ಬೇಡಿಕೆ ಇಂದು ನಿನ್ನೆಯದಲ್ಲ. ಕಳೆದ ವರ್ಷ ಫೆ.14 ರಂದು ಕಾಶಿಪೀಠದಲ್ಲಿ ಪ್ರಧಾನಿ ಮೋದಿಗೆ ಮನವಿ ಪತ್ರ ಸಲ್ಲಿಸಲು ಹೋಗಿದ್ದೇವು, ಆದರೆ, ನೇರವಾಗಿ ಪ್ರಧಾನಿಗೆ ಕೊಡಬಾರದು ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದರಿಂದ ಕೊಡಲಿಲ್ಲ, ಈಗ ಮುಖ್ಯಮಂತ್ರಿಗೆ ಮನವಿ ಕೊಟ್ಟಿದ್ದೇವೆ ಎಂದರು.
ಕಾನೂನು ಬದ್ಧವಾಗಿ ಸರ್ಕಾರ ಮೀಸಲು ನೀಡಲಿ. ಇದಕ್ಕಾಗಿ ಫೆ.18 ಮತ್ತು 19 ರಂದು ಕೆಲವು ಸ್ವಾಮೀಜಿಗಳನ್ನು ಮತ್ತೆ ಸಿಎಂ ಬಳಿ ಕಳಿಸುತ್ತೇವೆ. ಕಾದು ನೋಡಿ ಮುಂದೆ ಏನು ಮಾಡಬೇಕು ಎಂದು ನಿರ್ಧರಿಸುತ್ತೇವೆ. ವೀರಶೈವರಿಗೆ ಒಬಿಸಿ ಮೀಸಲಾತಿ ಹೋರಾಟ ಕುರಿತು ಸಭೆ ಮಾಡಿರುವುದರಲ್ಲಿ ಸಿಎಂ ಪುತ್ರ ವಿಜಯೇಂದ್ರರ ಕೈವಾಡವಿಲ್ಲ ಎಂದರು.