ಹರಪನಹಳ್ಳಿ: ಪಟ್ಟಣದ ಅಯ್ಯನಕೆರೆಯ ಪುನಶ್ಚೇತನ ಕಾಮಗಾರಿಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಪುರಸಭೆ ಅಧ್ಯಕ್ಷೆ ಎಂ.ಫಾತೀಮಾಬಿ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.
ಎಂ.ವಿ.ಅಂಜಿನಪ್ಪ ಮಾತನಾಡಿ, ಪಟ್ಟಣದ ಕೊಟ್ಟೂರು ರಸ್ತೆಯ ನಂಜನಗೌಡ ಬಡಾವಣೆಯಲ್ಲಿ ಒಂದು ಎಕರೆ ಪುರಸಭೆಯ ಜಾಗ ಇದ್ದು, ಈವರೆಗೆ ವಿವಿಧ ಸಂಘ-ಸಂಸ್ಥೆಗಳಿಗೆ ಜಾಗ ನೀಡಿರುವಂತೆ ಪುರಸಭೆ ನೌಕರರಿಗೆ ಕ್ವಾರ್ಟರ್ಸ್ ನಿರ್ಮಿಸಲು ಆ ಜಾಗ ಮೀಸಲಿಟ್ಟು, ಅನುದಾನ ಒದಗಿಸಬೇಕು ಎಂದು ಪ್ರಸ್ತಾಪಿಸಿದಾಗ ಸದಸ್ಯರು ಸಹಮತ ಸೂಚಿಸಿದರು.
ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಶೀಘ್ರ ಕಡಿವಾಣ ಹಾಕಬೇಕು. ಮಳೆಯಿಂದ ಹೆಚ್ಚಾಗಿರುವ ಕೋರಿಹುಳುಗಳ ಉಪಟಳ ನಿಯಂತ್ರಣಕ್ಕೆ ಉಪಾಯ ಕಂಡುಕೊಳ್ಳುವಂತೆ ಜಾಕೀರ್ ಹುಸೇನ್ ಆಗ್ರಹಿಸಿದರು.
ಸುಣಗಾರ ಕೇರಿಯಲ್ಲಿರುವ ಎಸ್‌ಎಚ್‌ಡಿ ಶಾಲೆ ಬಳಿ ಶೌಚಗೃಹ ನಿರ್ಮಿಸಬೇಕೆಂದು ಶೋಭಾ ಒತ್ತಾಯಿಸಿದರು. ಮಂಜುನಾಥ ಇಜಂತಕರ್ ಮಾತನಾಡಿ, ಪಟ್ಟಣದ ಪುರಸಭೆ ಬಳಿ ನಿರ್ಮಿಸುತ್ತಿರುವ ದಿನವಹಿ ಮಾರುಕಟ್ಟೆ ಹಾಗೂ ಡಿವೈಡರ್ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಬೇಗ ಪೂರ್ಣಗೊಳಿಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿ ಎಂದು ಆಗ್ರಹಿಸಿದರು.
ಐ.ಬಿ. ವೃತ್ತದಿಂದ ನ್ಯಾಷನಲ್ ಶಾಲೆವರೆಗೆ ರಸ್ತೆ ತೀರಾ ಹದಗೆಟ್ಟಿದ್ದು, ಅದನ್ನು ಸರಿಪಡಿಸುವಂತೆ ನಾಮನಿರ್ದೇಶಿತ ಸದಸ್ಯೆ ಸುಮಾ ಜಗದೀಶ ಕೋರಿದರು. ತೆಲುಗರ ಓಣಿಯಲ್ಲಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆ ಮಾಡಬೇಕು ಎಂದು ಜಾವೇದ್ ಆಗ್ರಹಿಸಿದರು.
ಈ ಬಾರಿಯ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಬೇಕು ಎಂದು ಎಂ.ವಿ.ಅಂಜಿನಪ್ಪ ಸಲಹೆ ನೀಡಿದರು.
ಪಟ್ಟಣದ ವ್ಯಾಪ್ತಿಯ ಏಳು ಶುದ್ಧ ಕುಡಿವ ನೀರಿನ ಘಟಕಗಳ ದುರಸ್ತಿ ಮತ್ತು ವಾರ್ಷಿಕ ನಿರ್ವಹಣೆ ಮಾಡುವ ಬಗ್ಗೆ, ಪಟ್ಟಣದ ಐ.ಬಿ.ವೃತ್ತದಲ್ಲಿರುವ ಇಂದಿರಾ ಕ್ಯಾಂಟೀನ್ ಸುತ್ತ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಭೆ ಅನುಮೋದನೆ ನೀಡಿತು.