ಹರಪನಹಳ್ಳಿ: ಪಟ್ಟಣದ ಐ.ಬಿ.ವೃತ್ತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪುರಸಭೆ ಸಭಾಂಗಣಕ್ಕೆ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಹೆಸರು ನಾಮಕರಣ ಮಾಡಲು ಪುರಸಭೆ ಸಾಮಾನ್ಯ ಸಭೆಯಲ್ಲಿ ಗುರುವಾರ ಒಪ್ಪಿಗೆ ಸೂಚಿಸಲಾಯಿತು.
ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲು ನ್ಯಾಯಾಧೀಶರ ಸೂಚನೆಯಂತೆ ನಿರ್ಧಾರ ತಗೆದುಕೊಳ್ಳಲಾಯಿತು. ಜಾಕೀರ್ ಹುಸೇನ್ ಮಾತನಾಡಿ, ಎಲ್ಲ ವಾರ್ಡ್‌ಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು. ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಮಾತನಾಡಿ, ಕೆಕೆಆರ್‌ಡಿಬಿ ಅನುದಾನದಲ್ಲಿ ಶಾಸಕರು ಎಲ್ಲ ವಾರ್ಡ್‌ಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪಟ್ಟಣದ ಸಿಎ ನಿವೇಶನಗಳು ಒತ್ತುವರಿಯಾಗಬಾರದು. ಆದ್ದರಿಂದ ಎಲ್ಲ ಸಿಎ ನಿವೇಶನಗಳಿಗೆ ತಂತಿ ಬೇಲಿ ಅಳವಡಿಸಿ ಎಂದು ನಾಮನಿರ್ದೇಶಿತ ಸದಸ್ಯ ಹೇಮಣ್ಣ ಮೋರಗೇರಿ ಸಲಹೆ ನೀಡಿದರು. ನಾಮನಿರ್ದೇಶನ ಸದಸ್ಯರಿಗೆ ಗೌರವ ಧನ ನೀಡಿ ಎಂದು ಸುಮಾ ಜಗದೀಶ ಆಗ್ರಹಿಸಿದರು. ಗುಡಿ ನಾಗರಾಜ, ವಸಂತಪ್ಪ ಮಾತನಾಡಿ, ಹೂವಿನಹಡಗಲಿ ಹಾಗೂ ಸಂಡೂರು ಪುರಸಭೆಯಲ್ಲಿ ಗೌರವ ಧನ ನೀಡಲಾಗಿದೆ ಎಂದು ತಿಳಿಸಿದರು. ಮುಖ್ಯಾಧಿಕಾರಿ, ಸರ್ಕಾರದ ಆದೇಶವಿದ್ದರೆ ತೋರಿಸಿ ಎಂದು ತಿಳಿಸಿದರು.
ಪಟ್ಟಣದ ವ್ಯಾಪ್ತಿಯಲ್ಲಿ ಬರುವ ವಿವಿಧ ಏಕ ನಿವೇಶನ ವಸತಿ ವಿನ್ಯಾಸಕ್ಕೆ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರು ತಯಾರಿಸಿರುವ ಕರಡು ವಿನ್ಯಾಸಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಪುರಸಭೆಗೆ ವಿವಿಧ ಯೋಜನೆಗಳಲ್ಲಿ ಬಿಡುಗಡೆಯಾಗಿರುವ ಅನುದಾನಗಳ ಪೈಕಿ ಅನುಮೋದನೆ ಪಡೆದ ಕ್ರಿಯಾಯೋಜನೆಗಳ ಕಾಮಗಾರಿಗಳನ್ನು ಇ.ಪ್ರೊಕ್ಯೂರ್‌ಮೆಂಟ್ ಮೂಲಕ ಕರೆದಿರುವ ಟೆಂಡರುಗಳಿಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಇಂಜಿನಿಯರ ಸಿದ್ದೇಶ, ಆರೋಗ್ಯ ನಿರೀಕ್ಷಕ ಮಂಜುನಾಥ ಇತರರಿದ್ದರು.