ಹರಪನಹಳ್ಳಿಯಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ನರೇಗಾ ಯೋಜನೆ ವೈಯಕ್ತಿಕ ಕಾಮಗಾರಿ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರವನ್ನು ಡಿಸಿ ಎಂ.ಎಸ್.ದಿವಾಕರ ವಿತರಿಸಿದರು. ಜಿ.ಪಂ ಸಿಇಒ ಮೊಹಮದ್ ಅಕ್ರಂ ಷಾ, ತಹಸೀಲ್ದಾರ್ ಬಿ.ವಿ ಗಿರೀಶ್‌ಬಾಬು, ಶಾಸಕಿ ಎಂ.ಪಿ.ಲತಾ, ಡಿವೈಎಸ್ಪಿ ವೆಂಕಟಪ್ಪ ನಾಯಕ, ತಾ.ಪಂ ಇಒ ಚಂದ್ರಶೇಖರ್, ವೈದ್ಯಾಧಿಕಾರಿ ಎಲ್.ಶಂಕರ್‌ನಾಯ್ಕ, ಪಿಡಿಒ ಮಂಜುನಾಥ ಇದ್ದರು. 
ಜಿಲ್ಲೆ

ಮದ್ಯದ ಅಕ್ರಮ ಮಾರಾಟ ನಿಲ್ಲಿಸಿ, ಅಧಿಕಾರಿಗಳಿಗೆ ಡಿಸಿ ಎಂ.ಎಸ್.ದಿವಾಕರ ಸೂಚನೆ

ಹರಪನಹಳ್ಳಿ: ತಾಲೂಕಿನ ಚಿಕ್ಕಮೇಗಳಕೇರಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಯುವಕರು, ಅಪ್ರಾಪ್ತರು ಕುಡಿದು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಮದ್ಯ ಮಾರಾಟ ಬಂದ್ ಮಾಡಿಸಿ ಎಂದು ಗ್ರಾಮದ ಮಹಿಳೆಯರು ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರು.

ಪಟ್ಟಣದ ಡಾ.ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ತಾಲೂಕು ಆಡಳಿತದಿಂದ ಸೋಮವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಅಕ್ರಮವಾಗಿ ಮದ್ಯ ಮಾರಾಟ ಬಂದ್ ಮಾಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಚಿಕ್ಕಬ್ಬಳ್ಳಿ, ಅರಸೀಕೆರೆ, ಬೂದಿಹಾಳ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಮಾಡಿಸಿ ಎಂದು ಬೂದಿಹಾಳ ಗ್ರಾಮದ ಡಿ.ಕೆ.ಮರಿಯಪ್ಪ ಮತ್ತು ಯರಬಾಳು, ಮತ್ತೂರು ಗ್ರಾಮಕ್ಕೆ ಬಸ್ಸಿನ ಸೌಕರ್ಯ ಒದಗಿಸಿ ಎಂದು ಸ್ಥಳೀಯ ಜನರು ಕೋರಿದರು. ಚಿಗಟೇರಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಕೋರ್ಟ್‌ನಿಂದ ತಡೆಯಾಜ್ಞೆ ಇರುವ ಮನೆಗಳನ್ನು ಹೊರತುಪಡಿಸಿ, ಉಳಿದಂತೆ ಒತ್ತುವರಿ ತೆರವುಗೊಳಿಸಿ ರಸ್ತೆ ವಿಸ್ತರಣೆ ಮಾಡಿ ಎಂದು ಗ್ರಾಮಸ್ಥರು ಅಹವಾಲು ಸಲ್ಲಿಸಿದರು. ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಪ್ರತಿಕ್ರಿಯಿಸಿ, ರಸ್ತೆ ನಿರ್ಮಾಣವಾಗಲು ಗ್ರಾಮದ ಕೆಲವರು ವಿನಾಕಾರಣ ಅಧಿಕಾರಿಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದರು.

ಆಗ ಗ್ರಾಮಸ್ಥ ಜಾತಪ್ಪ, ಶಾಸಕಿ ನಡುವೆ ಮಾತಿನ ಚಕಮಕಿ ನಡೆಯಿತು. ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ನಾಳೆಯೇ ರಸ್ತೆ ವಿಸ್ತರಣೆ ಕಾರ್ಯ ಆರಂಭಿಸಿ. ಯಾರಾದರೂ ಅಡ್ಡಿಪಡಿಸಿದರೆ, ಮುಲಾಜಿಲ್ಲದೆ ಒದ್ದು ಒಳಗೆ ಹಾಕಿ ಎಂದು ಪೊಲೀಸರಿಗೆ ಸೂಚಿಸಿದರು. ಡಿಸಿ ಎಂ.ಎಸ್.ದಿವಾಕರ ವಾತಾವರಣ ತಿಳಿಗೊಳಿಸಿದರು.

ದ್ಯಾಪನಾಯಕನಹಳ್ಳಿಯಲ್ಲಿ ಶುದ್ದ ಕುಡಿವ ನೀರಿನ ಘಟಕ ನಿರ್ಮಿಸುವಂತೆ ಗ್ರಾಮಸ್ಥ ಕೋರಿದಾಗ, ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಶುದ್ಧ ಕುಡಿವ ನೀರಿನ ಘಟಕ ಆರಂಭಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸುವಂತೆ ತಾಪಂ ಇಒಗೆ ಡಿಸಿ ದಿವಾಕರ ಸೂಚಿಸಿದರು. ಆಶ್ರಯ ಮನೆಗಳ ಹಕ್ಕುಪತ್ರ ನೀಡಲು ಯಾರಾದರೂ ಹಣ ಕೇಳಿದರೆ ಪೊಲೀಸರಿಗೆ ದೂರು ಕೊಡಿ ಎಂದು ಫಲಾನುಭವಿಗಳಿಗೆ ಡಿಸಿ ತಿಳಿಸಿದರು. ಕೆ.ಕಲ್ಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 400 ಮಕ್ಕಳಿದ್ದು, ಕೂಡಲೆ ಶೌಚಗೃಹ ನಿರ್ಮಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿ.ಪಂ ಸಿಇಒ ನೊಂಗ್ಜಾಯ್ ಮೊಹಮದ್ ಅಲಿ ಅಕ್ರಂ ಷಾ, ಎಸಿ ಚಿದಾನಂದ ಗುರುಸ್ವಾಮಿ, ಡಿವೈಎಸ್ಪಿ ವೆಂಕಟಪ್ಪ ನಾಯಕ, ತಹಸೀಲ್ದಾರ್ ಬಿ.ವಿ.ಗಿರೀಶಬಾಬು, ತಾ.ಪಂ. ಇಒ ಚಂದ್ರಶೇಖರ್, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

====

ಬ್ರಿಟೀಷರ ಕಾಲದ ಕಟ್ಟಡ ಬಾಡಿಗೆಗೆ ಕೊಡಿ!

ಬ್ರಿಟೀಷರ ಕಾಲದಲ್ಲಿ ನಿರ್ಮಿಸಲಾದ ಪಟ್ಟಣದ ಹಳೆಯ ತಹಸಿಲ್ ಕಚೇರಿ ಕಟ್ಟಡವನ್ನು ಹೋಟೆಲ್ ನಡೆಸಲು ಬಾಡಿಗೆಗೆ ಕೊಡಿ ಎಂದು ಕೋಡಿಹಳ್ಳಿ ಶೇಖಪ್ಪ ಅರ್ಜಿ ಸಲ್ಲಿಸಿದರು. ಶಾಸಕಿ ಹಾಗೂ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ‘ಬಾಡಿಗೆ ಕೊಡಲು ಬರುವುದಿಲ್ಲ’. ಎಂದರು.

48 ಅರ್ಜಿಗಳು ಇತ್ಯರ್ಥ

ಪೌರ ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು. ತೆಲಿಗಿ ಗ್ರಾಮದಲ್ಲಿ ಸಿಡಿಲಿಗೆ ಬಲಿಯಾದ ಚನ್ನಗಿರಿ ಹಾಲೇಶಪ್ಪ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರದ ಮಂಜೂರಾತಿ ಪತ್ರ ನೀಡಲಾಯಿತು. ಜನಸ್ಪಂದನ ಕಾರ್ಯಕ್ರಮದಲ್ಲಿ ಒಟ್ಟು 242 ಅರ್ಜಿಗಳು ಸಲ್ಲಿಕೆಯಾಗಿ 48 ಸ್ಥಳದಲ್ಲೇ ಇತ್ಯರ್ಥ ಪಡಿಸಲಾಯಿತು.

ಕೋಟ್: ಜನಸಾಮಾನ್ಯರು ವಿವಿಧ ಕೆಲಸಗಳಿಗಾಗಿ ಕಚೇರಿಗೆ ಬಂದಾಗ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೌಜನ್ಯದಿಂದ ವರ್ತಿಸಿ, ತ್ವರಿತವಾಗಿ ಕೆಲಸ ಮಾಡಿಕೊಡಬೇಕು.

ಎಂ.ಎಸ್.ದಿವಾಕರ. ಜಿಲ್ಲಾಧಿಕಾರಿ. ವಿಜಯನಗರ