ಹರಪನಹಳ್ಳಿ: ವಿದ್ಯೆಯಂತೆ ಕ್ರೀಡೆಯೂ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಆದ್ದರಿಂದ ಮಕ್ಕಳು ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕೆಂದು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಷಣ್ಮುಖಪ್ಪ ಹೇಳಿದರು.
ಪಟ್ಟಣದ ತಾಲೂಕು ಕ್ರಿಡಾಂಗಣದಲ್ಲಿ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ನ್ಯಾಷನಲ್ ಸ್ಕೂಲ್ ಸಹಯೋಗದೊಂದಿಗೆ ಆಯೋಜಿಸಿದ್ದ ಪಶ್ಚಿಮ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ಚೈತನ್ಯ ಮೂಡಲಿದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್ ಮಾತನಾಡಿ, ಕ್ರೀಡೆಯು ಮಕ್ಕಳಲ್ಲಿ ಶಿಸ್ತು ಕಲಿಸುತ್ತದೆ.
ಪ್ರಸ್ತುತ ದಿನಗಳಲ್ಲಿ ಮಕ್ಕಳು ಮೊಬೈಲ್ ಗೀಳಿಗೆ ಮೊರೆ ಹೋಗಿ ಕ್ರಿಯಾಚಟುವಟಿಕೆಯಿಂದ ದೂರವಿದ್ದು, ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಪಾಲಕರು ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳ ಬಗ್ಗೆ ತಿಳಿಸಬೇಕು ಎಂದರು.