ಹರಪನಹಳ್ಳಿ ತಾಲೂಕು ಚಿಗಟೇರಿಯಲ್ಲಿ ಶ್ರೀ ನಾರದಮುನಿ ಸ್ವಾಮಿಯ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು.  
ಜಿಲ್ಲೆ

ನಾರದಮುನಿ ಸ್ವಾಮಿ ರಥೋತ್ಸವ ಅದ್ದೂರಿ

ಹರಪನಹಳ್ಳಿ: ಮಧ್ಯ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿರುವ ತಾಲೂಕಿನ ಚಿಗಟೇರಿ ಗ್ರಾಮದ ಶ್ರೀ ನಾರದಮುನಿ ಸ್ವಾಮಿಯ ರಥೋತ್ಸವ ಭಾನುವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ರಥೋತ್ಸವ ನಿಮಿತ್ತ ಬೆಳಗ್ಗೆಯಿಂದಲೇ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ನಾರದ ಮುನಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಾರುಗುಳ್ಳೆ ಇರುವವರು ಇಲ್ಲಿಗೆ ಬಂದು ನಾರು ಎಸೆದು ಹರಕೆ ತೀರಿಸಿದರೆ ನಾರುಗುಳ್ಳೆ ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ಕ್ಷೇತ್ರದ ಪದ್ಧತಿಯಂತೆ ವಿವಿಧ ಬೆಡಗಿನ ಭಕ್ತರು ಮೀಸಲು ಪದಾರ್ಥಗಳಾದ ಅಕ್ಕಿ, ಬೆಲ್ಲ, ಹಾಲು, ಬಾಳೆಹಣ್ಣಿನ ವಿಶಿಷ್ಟ ಪ್ರಸಾದವನ್ನು ಮಣ್ಣಿನ ಮಡಕೆಯಲ್ಲಿ ತಯಾರಿಸಿ ಹರಕೆ ಒಪ್ಪಿಸಿದರು.

ಸಂಜೆ 5 ಗಂಟೆಯ ನಂತರ ಮೂಲ ನಕ್ಷತ್ರದ ವೇಳೆಗೆ ರಥೋತ್ಸವ ಆರಂಭವಾಗುತ್ತಿದ್ದಂತೆ ನಾರು ಎಸೆದು ಭಕ್ತರು ಶಿವ ನಾರದಮುನಿ ಗೋವಿಂದಾ… ಗೋವಿಂದಾ ಎಂದು ಜಯಘೋಷ ಹಾಕಿದರು. ಗ್ರಾಪಂ ಅಧ್ಯಕ್ಷ ನಾಗರಾಜ, ಶಾಮನೂರು ಬಸವರಾಜಪ್ಪ, ಒಡ್ಡಿನಹಳ್ಳಿ ಷಡಕಪ್ಪ, ಪಲ್ಲಾಗಟ್ಟೆ ನಾಗರಾಜ, ದ್ಯಾಮನಗೌಡ್ರು, ರಾಜನಗೌಡ್ರು ಹಾಗೂ ವಿಜಯನಗರ, ಬಳ್ಳಾರಿಯಲ್ಲದೆ ವಿವಿಧ ಜಿಲ್ಲೆಗಳ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಪುನೀತರಾದರು. ಜಾತ್ರೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು. ಎನ್‌ಎಸ್‌ಆರ್ ತಂಡ 75, ಐಆರ್‌ಬಿ ಫೋರ್ಸ್ 23, ಕೆಎಸ್‌ಆರ್ 50 ಹಾಗೂ ಪೊಲೀಸ್ ಸಿಬ್ಬಂದಿ 60, ಗೃಹ ರಕ್ಷಕ ದಳದ 50 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಬಾಳೆಹಣ್ಣು ನಿಷೇಧ

ಎಲ್ಲೆಡೆ ರಥಗಳಿಗೆ ಉತ್ತತ್ತಿ, ಬಾಳೆಹಣ್ಣು, ಹೂ ಎಸೆದು ಭಕ್ತಿ ಸಮರ್ಪಿಸಿದರೆ, ಇಲ್ಲಿನ ಬ್ರಹ್ಮ ರಥಕ್ಕೆ ಭಕ್ತರು ನಾರಿನ (ಕತ್ತಾಳೆ ನಾರು) ಕಟ್ಟು ತೂರುವುದು ವಿಶೇಷ. ಹಾಗಾಗಿಯೇ ಚಿಗಟೇರಿ ಎಂಬ ಊರಿಲ್ಲ, ನಾರಪ್ಪನೆಂಬ ದೇವರಿಲ್ಲ ಎನ್ನುವ ಮಾತು ಜನರ ಬಾಯಲ್ಲಿ ಸದಾ ಚಾಲ್ತಿಯಲ್ಲಿರುತ್ತದೆ. ಏ.29ರ (ಸೋಮವಾರ) ಸಂಜೆ 5:30ಕ್ಕೆ ಓಕುಳಿ ಉತ್ಸವ ನಡೆಯಲಿದೆ. ರಥೋತ್ಸವ ಆದ ಮೂರನೇ ದಿನ ಸಂಜೆ ವಿಷ್ಣು ಹಾಗೂ ಸಾವಕ್ಕ ವಿವಾಹ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಈ ವರ್ಷ ರಥಕ್ಕೆ ಬಾಳೆ ಹಣ್ಣು ಎಸೆಯುವುದನ್ನು ದೇವಸ್ಥಾನದ ಆಡಳಿತ ಮಂಡಳಿ ನಿಷೇಧಿಸಿತ್ತು. ಎಲ್ಲರೂ ಸಹಕಾರ ನೀಡಿದ್ದರಿಂದ ರಥೋತ್ಸವ ಯಶಸ್ವಿಯಾಗಿದೆ. ಬಂದ ಭಕ್ತರಿಗೆ ಗ್ರಾಮಸ್ಥರು, ಟ್ರಸ್ಟ್, ಗ್ರಾಪಂನಿಂದ ಅಗತ್ಯ ಸೌಕರ್ಯ ಕಲ್ಪಿಸಲಾಗಿತ್ತು.| ಅಣಬೇರು ರಾಜಣ್ಣ ಅಧ್ಯಕ್ಷ, ನಾರದಮುನಿ ದೇವಸ್ಥಾನದ ಟ್ರಸ್ಟ್, ಚಿಗಟೇರಿ