ಚಿಗಟೇರಿ ಗ್ರಾಮದ ನಾರದ ಮುನಿ ಪ್ರೌಢ ಶಾಲೆಯಲ್ಲಿ ಡೆಂಗ್ಯೂ ನಿಯಂತ್ರಣ ಕ್ರಮಗಳ ಬಗ್ಗೆ ಭಿತ್ತಿ ಪತ್ರಗಳ ಮೂಲಕ ಜಾಗೃತಿ ಮೂಡಿಸಲಾಯಿತು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಒ.ಚಂದ್ರೇಗೌಡ, ತ್ಯಾಗರಾಜ್, ಪ್ರೇಮ ಸಿ, ಮುಖ್ಯ ಶಿಕ್ಷಕ ಓಬಳೇಶ, ಶಿಕ್ಷಕರಾದ ಚಂದ್ರಪ್ಪ ಹಲಗೇರಿ, ಜನಾರ್ದನ ರೆಡ್ಡಿ, ಕೆ.ಟಿ.ಲತಾ, ಮಮತಾ ಕಮ್ಮಾರ, ಕೆ.ಸಿ.ಶುಭಾ, ದಯಾನಂದ ಎಂ.ಎನ್., ದರ್ಶನ್ ಡಿ.ಎಂ., ಇತರರಿದ್ದರು. 
ಜಿಲ್ಲೆ

ರಕ್ಷಣಾ ಮಾರ್ಗಗಳನ್ನು ಅನುಸರಿಸಿ

ಹರಪನಹಳ್ಳಿ: ಈಡಿಸ್ ಈಜಿಪ್ಟ್ ಸೊಳ್ಳೆಗಳು ಹರಡದಂತೆ ಸುತ್ತ್ತಲಿನ ವಾತಾವರಣ ಸ್ವಚ್ಛವಾಗಿರಿಸಿ ತಾಲೂಕಿನ ಎಲ್ಲ ಶಾಲೆ-ಕಾಲೇಜುಗಳನ್ನು ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ಮುಕ್ತ ಮಾಡೋಣ ಎಂದು ಬಿಎಚ್‌ಇಒ ಭುವನೇಶ್ವರಿ ತಿಳಿಸಿದರು.

ತಾಲೂಕಿನ ಚಿಗಟೇರಿ ಗ್ರಾಮದ ನಾರದ ಮುನಿ ಪ್ರೌಢ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಗಟ್ಟುವ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೊಳ್ಳೆಗಳ ಕಡಿತದಿಂದ ಹಲವಾರು ಸಾಂಕ್ರಾಮಿಕ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದ್ದಕ್ಕಿದ್ದಂತೆ ತೀವ್ರಜ್ವರ, ವಿಪರೀತ ತಲೆನೋವು, ಕಣ್ಣುಗಳು, ಮಾಂಸ-ಖಂಡಗಳಲ್ಲಿ ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತವೆ. ಈ ಕಾಯಿಲೆಗಳ ಬಗ್ಗೆ ಎಚ್ಚರವಹಿಸಬೇಕು. ಈ ಲಕ್ಷಣಗಳು ಕಾಣಿಸಿಕೊಂಡಾಗ ಸಮೀಪದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕೆಂದರು.

ಬ್ಯಾರಲ್, ತೊಟ್ಟಿಗಳು, ಮಣ್ಣಿನ ಮಡಕೆ, ಹೂವಿನ ಕುಂಡಲಗಳು, ಪ್ಲಾಸ್ಟಿಕ್ ಲೋಟಗಳು, ಟೈರ್ ಹಾಗೂ ಇತರ ಪಾತ್ರೆಗಳಲ್ಲಿ ದೀರ್ಘ ಸಮಯ ನೀರನ್ನು ಸಂಗ್ರಹಿಸಿಡುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದ ಸೊಳ್ಳೆ ಪರದೆ ಕಟ್ಟಿಕೊಳ್ಳುವುದು, ಮನೆಗಳಿಗೆ ಜಾಲರಿ ಅಳವಡಿಸುವುದು ಸೇರಿದಂತೆ ರಕ್ಷಣಾ ಮಾರ್ಗೋಪಾಯಗಳನ್ನು ಅನುಸರಿಸಬೇಕು ಎಂದು ಬಿಎಚ್‌ಇಒ ಭುವನೇಶ್ವರಿ ಸಲಹೆ ನೀಡಿದರು.