ಹರಪನಹಳ್ಳಿ: ರೈತರಿಗೆ ಬಿತ್ತನೆಬೀಜ ಹಾಗೂ ರಸಗೊಬ್ಬರ ವಿತರಿಸುವಲ್ಲಿ ವಿಫಲರಾಗಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿ ಮಂಡಲದಿಂದ ಪಟ್ಟಣದ ಕೃಷಿ ಇಲಾಖೆ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಮಂಡಲ ಅಧ್ಯಕ್ಷ ಕೆ.ಲಕ್ಷ್ಮಣ ಮಾತನಾಡಿ, ಸರ್ಕಾರ ರೈತರಿಗೆ ಮಳೆಗಾಲಕ್ಕೆ ತಕ್ಕಂತೆ ರಸಗೊಬ್ಬರ ವಿತರಣೆ ಮಾಡದೆ ರೈತರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದೆ. ರೈತರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ದಿನದಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಈ ಬಾರಿ ಮುಂಗಾರು ವಾಡಿಕೆಗಿಂತ ಉತ್ತಮವಾಗಿದೆ. ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆ ಮಾಡಲು ಮುಂಜಾಗ್ರತೆ ಕ್ರಮವನ್ನು ಕೃಷಿ ಸಚಿವರು ತೆಗೆದುಕೊಳ್ಳದೆ ನಿರ್ಲಕ್ಷೃವಹಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಜಿ ನಿರ್ದೇಶಕ ಆರುಂಡಿ ನಾಗರಾಜ್ ಮಾತನಾಡಿ, ಕಳಪೆ ಬಿತ್ತನೆ ಬೀಜ ಮಾರಾಟ ಮತ್ತು ಕಲಬೆರಕೆ ರಸಗೊಬ್ಬರ ವಿತರಣೆ ಮಾಡುತ್ತಿರುವ ಏಜೆನ್ಸಿಗಳನ್ನು ಗುರುತಿಸಿ ಅವರ ಪರವಾನಗಿ ರದ್ದುಗೊಳಿಸಬೇಕು. ಯೂರಿಯಾ ಗೊಬ್ಬರದಿಂದ ಭೂಮಿಯ ಸತ್ವದ ಮೇಲೆ ದುಷ್ಪರಿಣಾಮ ಬೀರುವ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಿ ರೈತರ ಬೆಳೆಗಳಿಗೆ ಉಪಯುಕ್ತವಿರುವ ನ್ಯಾನೋ ಗೊಬ್ಬರದ ಬಗ್ಗೆ ಅರಿವು ಮೂಡಿಸುವ ಕೆಲಸ ಮುಂಗಾರು ಪೂರ್ವದಲ್ಲಿ ಮಾಡಬೇಕಿತ್ತು ಎಂದರು.