ಹರಪನಹಳ್ಳಿ: ವಿದ್ಯುತ್ ಸುರಕ್ಷತಾ ಸಪ್ತಾಹದ ನಿಮಿತ್ತ ಬೆಸ್ಕಾಂನಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೋಮವಾರ ಜಾಥಾ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಮನೆ ಅಥವಾ ಇತರ ಕಟ್ಟಡಗಳನ್ನು ವಿದ್ಯುತ್ ತಂತಿಗಳ ಸಮೀಪ ನಿರ್ಮಿಸದೆ ಅಂತರ ಕಾಯ್ದುಕೊಳ್ಳಬೇಕು. ಮಳೆಗಾಲದಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿಗಳನ್ನು ಮುಟ್ಟಬಾರದು. ವಿದ್ಯುತ್ ಕಂಬಗಳಿಗೆ ಬ್ಯಾನರ್ ಅಥವಾ ಜಾಹೀರಾತು ಫಲಕಗಳನ್ನು ಕಟ್ಟಬಾರದು ಎಂದು ಸೂಚಿಸಲಾಯಿತು.
ವಿದ್ಯುತ್ ಕಂಬಗಳಿಗೆ ಬಟ್ಟೆಗಳನ್ನು ಒಣಗಿಸಲು ತಂತಿಗಳನ್ನು ಕಟ್ಟಬಾರದು, ವಿದ್ಯುತ್ ತಂತಿ ಹಾದು ಹೋದ ಕಡೆ ಮರದ ರೆಂಬೆ-ಕೊಂಬೆಗಳನ್ನು ಕಡಿಯಬಾರದು. ತಂತಿ ಬೇಲಿಗಳಿಗೆ ವಿದ್ಯುತ್ ಹಾಯಿಸಬಾರದು. ವಿದ್ಯುತ್ ಅಕ್ರಮ ಸಂಪರ್ಕ ಪಡೆಯಬಾರದು ಎಂದು ತಿಳಿಸಲಾಯಿತು.
ಮನೆಗಳಲ್ಲಿ ವಿದ್ಯುತ್ ಸ್ವಿಚ್‌ಗಳು ಹಾಗೂ ಉಪಕರಣಗಳನ್ನು ಒದ್ದೆ ಕೈಗಳಿಂದ ಮುಟ್ಟಬಾರದು. ಮನೆಯಲ್ಲಿ ಮೂರು ಪಿನ್‌ಗಳ ಸಾಕೆಟ್‌ಗಳನ್ನು ಬಳಸಬೇಕು. ವೈರಿಂಗ್ ಕೆಲಸವನ್ನು ಸರ್ಕಾರಿ ಪರವಾನಗಿ ಹೊಂದಿರುವ ಗುತ್ತಿಗೆದಾರರಿಂದ ಮಾಡಿಸಿಕೊಳ್ಳಬೇಕು.
ಸಂಪರ್ಕಕ್ಕೆ ಸೂಕ್ತ ಗ್ರೌಂಡಿಂಗ್ ವ್ಯವಸ್ಥೆ ಮಾಡಲಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವುದು ಮತ್ತು ಐಎಸ್‌ಐ ಪ್ರಮಾಣಿತ ವೈರ್ ಹಾಗೂ ಕೇಬಲ್ಗಳನ್ನು ಬಳಸಬೇಕು. ಉಪಕರಣಗಳನ್ನು ಸುರಕ್ಷತೆಗಾಗಿ ನಿಯಮಿತವಾಗಿ ಪರೀಕ್ಷಿಸಿಕೊಳ್ಳಬೇಕು ಎಂದು ತಿಳಿಸಲಾಯಿತು. ಎಇಇ ಪ್ರಕಾಶ ಪತ್ತೆನೂರು, ಜೆಇ ಕೆ.ಎಂ.ಬಸವರಾಜ, ಸಿಬ್ಬಂದಿ ಇದ್ದರು.