ಹರಪನಹಳ್ಳಿ: ದೇಶದ ಸ್ವಾತಂತ್ರೃಕ್ಕಾಗಿ ದುಡಿದ ವರ್ಗವನ್ನು ಸಂಘಟಿಸಿ ಮುನ್ನೆಡಿಸಿದ ಇತಿಹಾಸ ಭಾರತ ಕಮ್ಯುನಿಸ್ಟ್ ಪಕ್ಷಕ್ಕಿದೆ ಎಂದು ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ರೇಣುಕಮ್ಮ ಹೇಳಿದರು.
ಬೆಣ್ಣಿಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ಭಾರತ ಕಮ್ಯುನಿಸ್ಟ್ ಪಕ್ಷದ ಎಂಟನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರೃ ನಂತರ ದುಡಿಯುವ ವರ್ಗದ ನ್ಯಾಯಸಮ್ಮತ ಹಕ್ಕುಗಳಿಗಾಗಿ ಕಮ್ಯುನಿಸ್ಟ್ ಪಕ್ಷ ನಿರಂತರವಾಗಿ ಹೋರಾಟ ನಡೆಸುತ್ತಿದೆ. ಆದರೆ, ಇಂದಿನ ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಕಾರ್ಯದರ್ಶಿ ಎಚ್.ಎಂ.ಸಂತೋಷ್ ಮಾತನಾಡಿ, ಜಾಗತೀಕರಣ ನೀತಿಗಳ ವಿರುದ್ಧ ಭಾರತ ಕಮ್ಯೂನಿಸ್ಟ್ ಪಕ್ಷ ನಿರಂತರವಾಗಿ ಹೋರಾಡುತ್ತಿದೆ. ಶ್ರಮಿಕ ವರ್ಗ ರಾಜಕೀಯ ಪ್ರಜ್ಞೆ ಬೆಳೆಸಿಕೊಂಡಾಗ ಶೋಷಣೆಯಿಂದ ಮುಕ್ತರಾಗಲು ಸಾಧ್ಯ ಎಂದರು. ತಾಲೂಕು ಮಂಡಳಿ ಕಾರ್ಯದರ್ಶಿಯಾಗಿ ರಮೇಶ್ ನಾಯ್ಕ, ಸಹ ಕಾರ್ಯದರ್ಶಿಗಳಾಗಿ ಬಳಿಗನೂರು ಕೊಟ್ರೇಶ್ ಮತ್ತು ಹಾವೇರಿ ದೊಡ್ಡಬಸಪ್ಪ, ಖಜಾಂಚಿಯಾಗಿ ಪುಷ್ಪ ಅವರನ್ನು ಆಯ್ಕೆ ಮಾಡಲಾಯಿತು.