ಹರಪನಹಳ್ಳಿ: ಪ್ರಸಕ್ತ ವರ್ಷ ವಾಡಿಕೆಗೂ ಅಧಿಕ ಮಳೆಯಾಗಿ ಅತಿವೃಷ್ಟಿಯಿಂದ ಸಾಕಷ್ಟು ರೈತರ ಬೆಳೆಗಳು ಹಾನಿಯಾಗಿದ್ದು, ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್ ಒತ್ತಾಯಿಸಿದರು.
ಅರಸೀಕೆರೆ ನಾಡ ಕಚೇರಿ ಮುಂದೆ ಅಖಿಲ ಭಾರತ ಕಿಸಾನ್ ಸಭಾದಿಂದ ಇತ್ತೀಚೆಗೆ ಪ್ರತಿಭಟನೆ ನಡೆಸಿ, ಉಪ ತಹಸೀಲ್ದಾರ್ ಶಿವಮೂರ್ತಿಗೆ ಮನವಿ ಸಲ್ಲಿಸಿ ಮಾತನಾಡಿದರು. ಅತಿ ಮಳೆಯಿಂದ ಗ್ರಾಮೀಣ ಪ್ರದೇಶದ ರಸ್ತೆಗಳು ಹದಗೆಟ್ಟು ವಾಹನ ಸವಾರರ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ದೂರಿದರು.
ರೈತರು ಬೆಳೆದ ಮೆಕ್ಕೆಜೋಳ, ರಾಗಿ, ಶೇಂಗಾ ಬೆಳೆಗಳು ಬಹುತೇಕ ಹಾಳಾಗಿವೆ. ಕೂಡಲೇ ಅಧಿಕಾರಿಗಳು ಬೆಳೆ ಪರಿಶೀಲಿಸಿ ಪರಿಹಾರ ಒದಗಿಸಬೇಕು. ಕೆಲವೆಡೆ ಉತ್ತಮ ಮಳೆಯಾಗಿ ಫಸಲು ಚೆನ್ನಾಗಿ ಬಂದಿದ್ದು, ಸಮರ್ಪಕ ರಸಗೊಬ್ಬರ ಸಿಗದೆ ರೈತರು ಪರದಾಡುವಂತಾಗಿದೆ ಅಸಮಾಧಾನ ವ್ಯಕ್ತಪಡಿಸಿದರು.