ಮಡಿಕೇರಿ: ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ತೀವ್ರ ಅಸಮಾಧಾನಕ್ಕೆ ಒಳಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರ ತಳೆದಿದ್ದ ತಾನು, ಕಾಂಗ್ರೆಸ್ ವರಿಷ್ಠರ ಮನವೊಲಿಕೆಯ ಬಳಿಕ ನಿಲುವನ್ನು ಬದಲಿಸಿಕೊಂಡು ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದೇನೆ ಎಂದು ಹರಪಳ್ಳಿ ರವೀಂದ್ರ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷೇತರನಾಗಿ ಸ್ಪರ್ಧಿಸಲು ಮುಂದಾಗಿದ್ದೆ. ಆದರೆ ಇದೀಗ ಕೆಪಿಸಿಸಿ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತನ್ನೊಂದಿಗೆ ಮಾತುಕತೆ ನಡೆಸಿ ಮುಂದಿನ ದಿನಗಳಲ್ಲಿ ಅಗತ್ಯ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಟಿಕೆಟ್ ಕೈ ತಪ್ಪಿದ ನಿರಾಸೆ ಇದ್ದರೂ, ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ ಅವರ ಗೆಲುವಿಗೆ ಶ್ರಮಿಸುತ್ತೇನೆ. ಅವರೊಂದಿಗೆ ಚುನಾವಣಾ ಪ್ರಚಾರಕ್ಕೂ ತೆರಳುತ್ತೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಚಿಂತನೆಗಳಡಿ ತಾನು ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ತನ್ನ ಚಿಂತನೆಯಂತೆ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ತಾಲೂಕುವಾರು ಸುಸಜ್ಜಿತ ಆರೋಗ್ಯ ಕೇಂದ್ರ, ಪ್ರವಾಸೋದ್ಯಮದ ಅಭಿವೃದ್ಧಿ, ಜಿಲ್ಲೆಯ ಯುವ ಸಮೂಹಕ್ಕೆ ಐಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವುದಕ್ಕೆ ಪೂರಕವಾದ ತರಬೆಫೀತಿ ಕೇಂದ್ರ, ಕ್ರೀಡಾ ತರಬೇತಿಗೆ ಅಗತ್ಯವಾದ ಮೂಲಸೌಲಭ್ಯ, ಸೈನಿಕ ಶಾಲೆಯ ಅಭಿವೃದ್ಧಿ ಮೊದಲಾದ ವಿಚಾರಗಳ ಬಗ್ಗೆ ಒತ್ತು ನೀಡುವುದಾಗಿ ಪಕ್ಷದ ಅಭ್ಯರ್ಥಿ ಡಾ.ಮಂತರ್ ಗೌಡರವರು ತನಗೆ ಭರವಸೆ ನೀಡಿರುವುದಾಗಿ ಹರಪ್ಪಳ್ಳಿ ರವೀಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಎಸ್.ಎಂ.ಚಂಗಪ್ಪ, ಎಂ.ಎಸ್.ನಂದ ಕುಮಾರ್, ಎಚ್.ಎ.ನಾಗರಾಜು ಹಾಗೂ ಕಿರಣ್ ಕಾರ್ಯಪ್ಪ ಉಪಸ್ಥಿತರಿದ್ದರು.