ಜಿಲ್ಲೆ

ಹಾರಂಗಿ ಜಲಾಶಯ ಪುನಶ್ಚೇತನ ಕಾಮಗಾರಿ

ಸುನಿಲ್ ಪೊನ್ನೇಟಿ

ಮಡಿಕೇರಿ:

೨೦೧೮ರ ಪ್ರಾಕೃತಿಕ ವಿಕೋಪ ಮತ್ತು ಭೂಕುಸಿತದ ಸಂದರ್ಭ ಹೂಳು ತುಂಬಿಕೊಂಡಿದ್ದ ಹಾರಂಗಿ ಜಲಾಶಯದ ಪುನಶ್ಚೇತನ ಕಾಮಗಾರಿ ಆರಂಭವಾಗಿದೆ. ಅಣೆಕಟ್ಟೆಗೆ ನೀರೊದಗಿಸುವ ಜಲಾನಯನ ಪ್ರದೇಶವೊಂದರ ಪುನಶ್ಚೇತನ ಕಾರ್ಯ ದೇಶದಲ್ಲೇ ಪ್ರಥಮ ಬಾರಿಗೆ ಕೊಡಗಿನಲ್ಲಿ ನಡೆಯುತ್ತಿದ್ದು, ೧೩೦ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಮಳೆಗಾಲದ ಅವಧಿ ಹೊರತುಪಡಿಸಿ ಒಟ್ಟು ೨೪ ತಿಂಗಳುಗಳಲ್ಲಿ ಈ ಕೆಲಸ ಮುಗಿಸುವ ಗುರಿ ಹೊಂದಲಾಗಿದೆ.

ಜಲಾಶಯಗಳಲ್ಲಿ ಹೂಳು ತುಂಬಿಕೊಂಡರೆ ಅದನ್ನು ತೆರವು ಮಾಡುವ ಮೂಲಕ ಅಣೆಕಟ್ಟೆ ಸಾಮರ್ಥ್ಯ ಮರುಸ್ಥಾಪಿಸಲು ಪ್ರಯತ್ನಿಸುವುದು ಸಾಮಾನ್ಯ. ಆದರೆ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿಯಲ್ಲಿ ವಿಭಿನ್ನ ಪ್ರಯತ್ನವೊಂದನ್ನು ಕಾವೇರಿ ನೀರಾವರಿ ನಿಗಮದಿಂದ ನಡೆಸಲಾಗುತ್ತಿದೆ. ಹಿನ್ನೀರಿನಲ್ಲಿ ಸಂಗ್ರಹವಾಗಿರುವ ಹೂಳು ತೆಗೆಯುವುದರ ಜತೆಗೆ ಜಲಾನಯನ ಪ್ರದೇಶದಲ್ಲಿ ಮತ್ತೆ ಗುಡ್ಡ ಕುಸಿಯದಂತೆ, ಪುನಃ ಹೂಳು ಬಂದು ಜಲಾಶಯ ಸೇರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು, ಅಗತ್ಯವಿರುವ ಕಡೆ ಸೇತುವೆ, ರಸ್ತೆಗಳನ್ನು ನಿರ್ಮಿಸುವ ಮೂಲಕ ಅಚ್ಚುಕಟ್ಟು ಪ್ರದೇಶ ಮಾತ್ರವಲ್ಲದೆ ಜಲಾನಯನ ಪ್ರದೇಶದ ನಿವಾಸಿಗಳಿಗೂ ಆತಂಕ ರಹಿತ ಬದುಕಿಗೆ ಈ ಯೋಜನೆ ನೆರವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

೨೦೧೮ರ ಆ.೧೫ ರಿಂದ ಆ. ೧೮ ರ ತನಕ ಸುರಿದ ಭಾರಿ ಮಳೆ ಸಂದರ್ಭ ಹಾರಂಗಿ ಜಲಾನಯನ ಪ್ರದೇಶದಲ್ಲಿ ಗುಡ್ಡಗಳು ಕುಸಿದಿದ್ದವು. ಹಾರಂಗಿ ಅಣೆಕಟ್ಟೆಗೆ ಹರಿದು ಬರುವ ಪ್ರಮುಖ ನದಿಗಳಾದ ಹಟ್ಟಿಹೊಳೆ, ನಂದಿಮೊಟ್ಟೆ ನದಿಗಳಿಗೆ ಗುಡ್ಡಗಳಿಂದ ಜಾರಿ ಬಿದ್ದ ಮಣ್ಣು ಮತ್ತು ಮರಗಳು ಶೇಖರಣೆಯಾಗಿ ನದಿ ಪಾತ್ರಗಳ ಮಾರ್ಗಗಳೇ ಬದಲಾಗಿ ನೀರು ಹರಿದಿತ್ತು. ಇದರಿಂದ ನದಿಯ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ತೋಟ, ರಸ್ತೆಗಳು ಹಾಗೂ ಮನೆಗಳಿಗೆ ಹಾನಿ ಆಗಿದ್ದವು.

ಮುಂಗಾರಿನ ಭಾರಿ ಮಳೆಗೆ ಸುತ್ತಮುತ್ತಲ ಗ್ರಾಮಗಳು, ಕಾಫಿ ತೋಟಗಳು, ರಸ್ತೆ ಮುಂತಾದ ಪ್ರದೇಶಗಳು ಕುಸಿದು ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ಹೂಳು ಹರಿದು ಬಂದಿದ್ದು, ಹೂಳಿನಲ್ಲಿ ಹೆಚ್ಚಿನ ಭಾಗ ಮಣ್ಣು ಇದ್ದು, ಮರಳು ಮತ್ತು ಇತರೆ ಖನಿಜಗಳು ಕಡಿಮೆ ಪ್ರಮಾಣದಲ್ಲಿರುವ ಬಗ್ಗೆ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್‌ನ ಹಿರಿಯ ಭೂವಿಜ್ಞಾನಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕೆ.ಎಸ್.ಎಂ.ಸಿ.ಎಲ್ ಅಧಿಕಾರಿಗಳೊಂದಿಗೆ ೨೦೧೮ರ ನವೆಂಬರ್ ೨೩ಕ್ಕೆ ನಡೆಸಿದ್ದ ಸಮೀಕ್ಷೆ ವೇಳೆ ಕಂಡು ಬಂದಿತ್ತು.

ಮಂಗಳೂರಿನ ಜಿಯೋಮೇರಿನ್ ಸಲ್ಯೂಷನ್ ಪ್ರೈವೇಟ್ ಲಿ. ಸಂಸ್ಥೆಯವರು ಬ್ಯಾತಿಮೆಟ್ರಿ ಮತ್ತು ಡೋನ್ ಮೂಲಕ ನಡೆಸಿದ ಸರ್ವೆ ವೇಳೆ ಅಣೆಕಟ್ಟೆಯ ಅಂಗಳದಲ್ಲಿ ೩೪.೯೯೩ ಮಿಲಿಯನ್ ಘನ ಮೀಟರ್ ಹೂಳು ಶೇಖರಣೆ ಆಗಿರುವುದು ತಿಳಿದು ಬಂದಿತ್ತು. ಹಾರಂಗಿ ಅಣೆಕಟ್ಟೆ ಸಾಮರ್ಥ್ಯ ೮.೫೦ ಟಿಎಂಸಿ ಆಗಿದ್ದು, ಸರ್ವೆ ಕಾರ್ಯ ನಡೆಸಿದ ನಂತರ ೧.೨೩೫ ಟಿಎಂಸಿ ನೀರು ಕಡಿಮೆ ಶೇಖರಣೆ ಆಗಿರುವುದನ್ನು ಗುರುತಿಸಲಾಗಿತ್ತು. ಹಾಗಾಗಿ ಅಣೆಕಟ್ಟೆಯ ಸಾಮಥ್ಯ ೭.೨೬೫ ಟಿಎಂಸಿಗೆ ಇಳಿದಿರುವ ಬಗ್ಗೆ ಸರ್ವೆ ವರದಿಯಲ್ಲಿ ಹೇಳಲಾಗಿತ್ತು.

೨೦೧೮ರಲ್ಲಿ ಗುಡ್ಡ ಕುಸಿತದಿಂದ ಅಣೆಕಟ್ಟೆ ಹಿನ್ನೀರಿನ ಪ್ರದೇಶದಲ್ಲಿ ೦.೮೮ ಮಿಲಿಯನ್ ಘನ ಮೀಟರ್ ಗಳಷ್ಟು ಹೂಳು ಶೇಖರಣೆಯಾಗಿದೆ. ಹಟ್ಟಿಹೊಳೆ ಮತ್ತು ನಂದಿಮೊಟ್ಟೆ ನದಿ ಪಾತ್ರದ ನದಿಯ ಬಲಭಾಗ ಮತ್ತು ಎಡಭಾಗದ ಗುಡ್ಡಗಳು ಕುಸಿತವಾಗಿ ನದಿಯ ಮಧ್ಯದವರೆಗೂ ಮಣ್ಣು ಸಂಗ್ರಹವಾಗಿದೆ. ಎಡಭಾಗದ ನದಿಯ ದಡ ರಸ್ತೆಯವರೆಗೂ ಕುಸಿದು, ರಸ್ತೆ ಮತ್ತು ಮನೆಗಳಿಗೆ ಹಾನಿ ಆಗಿತ್ತು. ಹಾರಂಗಿ ಜಲಾಶಯಕ್ಕೆ ಹಟ್ಟಿಹೊಳೆ, ಹಮ್ಮಿಯಾಲ ಹಾಗೂ ನಂದಿಮೊಟ್ಟೆ ಮುಖ್ಯ ನದಿಗಳಾಗಿದ್ದು, ಈ ನದಿಗಳಿಗೆ ಹರಿದು ಬರುವ ಉಪ-ನದಿಗಳಿಗೆ ಅಕ್ಕಪಕ್ಕದ ಗುಡ್ಡಗಳು ಕುಸಿತಗೊಂಡು, ನದಿಗಳ ದಿಕ್ಕು ಬದಲಾವಣೆಯಾಗುದರ ಜತೆಗೆ ನದಿಗಳ ಮೂಲ ದಿಕ್ಕುಗಳು ಪೂರ್ತಿಯಾಗಿ ಮುಚ್ಚಿಹೋಗಿ ಅಕ್ಕಪಕ್ಕದ ರೈತರ ಜಮೀನುಗಳ ಮೇಲೆ ನೀರು ಹರಿಯುವ ಸ್ಥಿತಿ ಉಂಟಾಗಿತ್ತು.

ಈ ಹಿನ್ನೆಲೆಯಲ್ಲಿ ಸಂಪೂರ್ಣ ಹಾರಂಗಿ ಜಲಾನಯನ ಪ್ರದೇಶಕ್ಕೆ ಪುನಶ್ಚೇತನ ನೀಡಲು ಕಾವೇರಿ ನೀರಾವರಿ ನಿಗಮ ಯೋಜನೆ ರೂಪಿಸಿ ಕಾರ್ಯೋನ್ಮುಖವಾಗಿದೆ. ಹಾರಂಗಿ ಅಣೆಕಟ್ಟೆ ಪುನ್ಚೇತನ ಮತ್ತು ಅಭಿವದ್ಧಿ ಕಾಮಗಾರಿಗಾಗಿ ಸರ್ಕಾರ ೧೩೦ ಕೋಟಿ ರೂ.ಗಳನ್ನು ತೆಗೆದಿಟ್ಟಿದೆ. ಈ ಮೊತ್ತದಲ್ಲಿ ೪೦ ಕೋಟಿ ರೂ.ಗಳನ್ನು ಹೂಳು ತೆಗೆಯಲು ಬಳಸಿದರೆ ಉಳಿದ ೯೦ ಕೋಟಿ ರೂ.ಗಳನ್ನು ಅಲ್ಲಲ್ಲಿ ತಡೆಗೋಡೆ, ಪಿಕಪ್ (ಚೆಕ್‌ಡ್ಯಾಂ), ಸೇತುವೆ, ರಸ್ತೆ ನಿರ್ಮಾಣ ಹಾಗೂ ಅಧ್ಯಯನ ಕಾರ್ಯಕ್ಕೆ ಉಪಯೋಗಿಸಲಾಗುತ್ತದೆ.

ಹಟ್ಟಿಹೊಳೆ, ಹಮ್ಮಿಯಾಲ, ನಂದಿಮೊಟ್ಟೆ ಭಾಗದ ನದಿಯ ಪಾರ್ಶ್ವಗಳಲ್ಲಿ ಗುಡ್ಡಕುಸಿತ, ಭೂಮಿ ಕೊರೆತ ಹಾಗೂ ಉಪನದಿಗಳಲ್ಲಿನ ನೀರಿನ ಹರಿಯುವಿಕೆ ವೇಗವನ್ನು ಮಿತಿಗೊಳಿಸಲು ಒಟ್ಟು ಸುಮಾರು ೪,೭೦೦ ಮೀಟರ್ ಸ್ಟೀಲ್ ವೈರ್ ಮೆಸ್ ಗೆಬಿಯನ್ ವಾಲ್ ನಿರ್ಮಿಸಲಾಗುತ್ತಿದೆ. ೩ ಸೇತುವೆಗಳನ್ನು ಪುನಃ ಕಟ್ಟಲಾಗುತ್ತದೆ. ೩೧೪ ಕಡೆಗಳಲ್ಲಿ ಪಿಕಪ್ (ಚೆಕ್‌ಡ್ಯಾಂ) ನಿರ್ಮಿಸುವ ಯೋಜನೆಯೂ ಸೇರಿದೆ. ೧.೫ ಕಿಮೀ ತಡೆಗೋಡೆಯನ್ನೂ ನಿರ್ಮಿಸಲಾಗುತ್ತಿದೆ.
ಇದೀಗ ಹಟ್ಟಿಹೊಳೆ ಸಮೀಪದ ಮುಕ್ಕೋಡ್ಲುವಿನಲ್ಲಿ ೧ ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿ ಕೆಲಸ ಭರದಿಂದ ಸಾಗಿದೆ. ಸ್ಟೀಲ್ ವೈರ್ ಮೆಸ್ ಗೆಬಿಯನ್ ವಾಲ್ ಮತ್ತು ತಡೆಗೋಡೆ ನಿರ್ಮಾಣ ಕೆಲಸವೂ ನಡೆಯುತ್ತಿದೆ. ಹಾರಂಗಿ ಅಣೆಕಟ್ಟೆಯಿಂದ ೧೨ ಕಿಮೀ ದೂರದಲ್ಲಿ ಇರುವ ಗರಗಂದೂರು ಸೇತುವೆ ಬಳಿ ನದಿಯಲ್ಲಿ ಹೆಚ್ಚಿನ ಪ್ರಮಾಣದ ಹೂಳು ಸಂಗ್ರಹ ಆಗಿದೆ. ಈ ಭಾಗದಲ್ಲಿ ಸುಮಾರು ೫ ಕಿ.ಮೀ. ಜಾಗದಲ್ಲಿ ಸರಾಸರಿ ಮೇಲ್ಮಟ್ಟವನ್ನು ಕಾಪಾಡಿಕೊಂಡು ಸಂಗ್ರಹವಾಗಿರುವ ಮೇಲ್ಮಣ್ಣು ತೆಗೆಯಲಾಗುತ್ತದೆ.

೧೩೦ ಕೋಟಿ ರೂ. ವೆಚ್ಚದ ಕಾಮಗಾರಿಯ ಗುತ್ತಿಗೆಯನ್ನು ಮಹಾರಾಷ್ಟ್ರ ಮೂಲದ ಸಂಸ್ಥೆಯೊಂದು ಪಡೆದುಕೊಂಡಿದ್ದು ವಿವಿಧ ಮಾದರಿಯ ಅಧುನಿಕ ಯಂತ್ರಗಳ ಮೂಲಕ ಕೆಲಸ ಮಾಡಲಾಗುತ್ತಿದೆ.
ನೀರಾವರಿ ನಿಗಮದ ಸಹಾಯಕ ಅಭಿಯಂತರ ದೇವೇಗೌಡ ಅವರ ಮೇಲುಸ್ತುವಾರಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಇ. ಪುಟ್ಟಸ್ವಾಮಿ, ಕಿರಿಯ ಇಂಜಿನಿಯರ್ ಕಿರಣ್, ಸಿದ್ದರಾಜ್, ಸೌಮ್ಯಾ ಸೇರಿದಂತೆ ತಾಂತ್ರಿಕ ವಿಭಾಗದ ಇಂಜಿನಿಯರ್‌ಗಳು ಸ್ಥಳದಲ್ಲಿಯೇ ಇದ್ದು, ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ. ಮಳೆಗಾಲದ ತಿಂಗಳುಗಳನ್ನು ಹೊರತುಪಡಿಸಿ ಒಟ್ಟು ೨೪ ತಿಂಗಳುಗಳಲ್ಲಿ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ,

೧೩೦ ಕೋಟಿ ರೂ. ವೆಚ್ಚದ ಹಾರಂಗಿ ಅಣೆಕಟ್ಟೆಯ ಪುನ್ಚೇತನ ಮತ್ತು ಅಭಿವದ್ಧಿ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಹಟ್ಟಿಹೊಳೆ, ಮುಕ್ಕೋಡ್ಲು ಭಾಗದಲ್ಲಿ ಕೆಲಸಗಳು ನಡೆಯುತ್ತಿದೆ. ಮುಕ್ಕೋಡ್ಲುವಿನಲ್ಲಿ ೧ ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ಗುಡ್ಡದ ಮಣ್ಣು ಮತ್ತೆ ನದಿ ಸೇರದಂತೆ ಗೆಬಿಯನ್ ವಾಲ್ ಮತ್ತು ತಡೆಗೋಡೆ ನಿರ್ಮಾಣ ಮಾಡಲಾಗುವುದು. ಗರಗಂದೂರು ಸೇತುವೆ ಸಮೀಪ ನದಿಯಲ್ಲಿ ಸಂಗ್ರಹವಾಗಿರುವ ಮೇಲ್ಮಣ್ಣು ತೆರವು ಮಾಡಲಾಗುವುದು.
ಇ. ಪುಟ್ಟಸ್ವಾಮಿ, ಕಾರ್ಯಪಾಲಕ ಅಭಿಯಂತರ, ಕಾವೇರಿ ನೀರಾವರಿ ನಿಗಮ