ಮಡಿಕೇರಿ:
ಹಾರಂಗಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗೆ ಬರುವ ನೀರನ್ನು ನೇರವಾಗಿ ನದಿಗೆ ಹರಿಸಲಾಗುತ್ತಿದೆ. ಜಲಾಶಯಕ್ಕೆ ಬರುವ ನೀರನ್ನೆಲ್ಲಾ ನದಿಗೆ ಬಿಡುವುದಾದರೆ ಅಣೆಕಟ್ಟೆಯಿಂದ ಏನು ಪ್ರಯೋಜನ ಎನ್ನುವ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ. ಕೊಟ್ಯಂತರ ರೂ. ವ್ಯಯಿಸಿ, ಏಕರೆಗಟ್ಟಲೆ ಕಾಡು ನಾಶ ಮಾಡಿ ಅಣೆಕಟ್ಟೆ ಕಟ್ಟಿದಾದರೂ ಯಾಕೆ ಎಂದು ಕೇಳುತ್ತಿರುವ ರೈತರು ಈ ನೀರನ್ನು ಬಳಸಿ ಅಚ್ಚುಕಟ್ಟು ಪ್ರದೇಶದ ಕೆರೆಯನ್ನಾದರೂ ತುಂಬಿಸಬಹುದಲ್ಲಾ ಎನ್ನುವ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿಯ ಈ ಅವೈಜ್ಞಾನಿಕ ನೀರು ನಿರ್ವಹಣೆ ಕಾರಣದಿಂದ ಭತ್ತ ಬೆಳೆಯುವ ಪ್ರದೇಶವೂ ಕ್ಷೀಣಿಸುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ.
ಕಾವೇರಿ ಕಣಿವೆಯಲ್ಲಿ ಪ್ರಮುಖ ಜಲಾಶಯವಾಗಿ ಗುರುತಿಸಿಕೊಂಡಿರುವ ಹಾರಂಗಿಗೆ ಬುಧವಾರದ ಮಾಹಿತಿ ಪ್ರಕಾರ ಈ ಬಾರಿ ೧೦.೧೯೫ ಟಿಎಂಸಿ ನೀರು ಹರಿದು ಬಂದಿದೆ. ಜಲಾಶಯದಲ್ಲಿ ೫.೮೮೯ ಟಿಎಂಸಿ ಬಳಕೆಯೋಗ್ಯ ನೀರಿದ್ದು, ೫.೯೧೧ ಟಿಎಂಸಿ ನೀರು ನದಿಯ ಮೂಲಕ ಕೆಆರ್‌ಎಸ್ ಕಡೆಗೆ ಹರಿದಿದೆ. ಹಾಗಾದರೆ ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಇದರಿಂದ ಏನು ಪ್ರಯೋಜನ ಆಯಿತು ಎನ್ನುವುದು ಸಾರ್ವಜನಿಕರ ಪ್ರಶ್ನೆ. ವ್ಯವಸಾಯಕ್ಕೆ ನೀರೊದಗಿಸುವ ಪ್ರಮುಖ ಉದ್ದೇಶದಿಂದ ಈ ಅಣೆಕಟ್ಟೆ ನಿರ್ಮಿಸಲಾಗಿದೆ. ಹಾರಂಗಿ ಅಣೆಕಟ್ಟೆ ನಿರ್ಮಾಣದ ಹಿಂದೆ ಕೊಡಗು, ಹಾಸನ ಹಾಗೂ ಮೈಸೂರು ಜಿಲ್ಲೆಗೆ ಸೇರಿದ ೧,೩೪,೮೯೫ ಎಕರೆ ಪ್ರದೇಶದ ಕೃಷಿ ಜಮೀನಿಗೆ ನೀರು ಹರಿಸುವ ಮಹತ್ವದ ಉದ್ದೇಶ ಇದೆ. ೨ ದಶಕದ ಹಿಂದಿನ ತನಕವೂ ಬೇಸಿಗೆ ಬೆಳೆಗೂ ಇಲ್ಲಿಂದ ನೀರು ಸಿಗುತ್ತಿತ್ತು.
ಅಣೆಕಟ್ಟೆಯ ತನಕ ಹಾರಂಗಿ ಜಲಾಶಯ ೪೧೯.೫೯ ಚ.ಕಿ.ಮೀ.ನಷ್ಟು ಜಲಾನಯನ ಪ್ರದೇಶ ಹೊಂದಿದೆ. ಜಲಾನಯನ ಪ್ರದೇಶದಲ್ಲಿ ವಾರ್ಷಿಕವಾಗಿ ೧೨೭ ಸೆ.ಮೀ.ನಿಂದ ೩೮೧ ಸೆ.ಮೀ. ತನಕವೂ ಮಳೆಯಾಗುತ್ತದೆ. ವರ್ಷಕ್ಕೆ ಒಟ್ಟು ೩೯.೩ ಟಿಎಂಸಿ ನೀರು ಹಾರಂಗಿ ಜಲಾನಯನ ಪ್ರದೇಶದಲ್ಲಿ ಸಂಗ್ರಹವಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ೧೮ ಟಿಎಂಸಿ ನೀರನ್ನು ವ್ಯವಸಾಯದ ಉದ್ದೇಶಕ್ಕಾಗಿ ಬಳಸಲು ಯೋಚಿಸಿ ೧೯೬೯ರಲ್ಲಿ ಈಗಿನ ಕುಶಾಲನಗರ ತಾಲೂಕು ಹುದುಗೂರು ಗ್ರಾಮದಲ್ಲಿ ಹಾರಂಗಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಾಣ ಕಾರ್ಯ ಆರಂಭಿಸಲಾಯಿತು. ೧೯೮೨ರಲ್ಲಿ ಜಲಾಶಯದ ಕಾರ್ಯನಿರ್ವಹಣೆ ಆರಂಭವಾಯಿತು. ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ೮.೫ ಟಿಎಂಸಿ. ’ಡೆಡ್ ಸ್ಟೋರೇಜ್’ ಕಳೆದರೆ ೮.೦೭೩ ಟಿಎಂಸಿ ನೀರು ಬಳಕೆಗೆ ಲಭ್ಯವಿದೆ.
ಹಾರಂಗಿ ಜಲಾನಯನ ಪ್ರದೇಶ ಗುಡ್ಡಗಾಡು, , ಇಳಿಜಾರಿನ ಕಣಿವೆ, ಅರಣ್ಯ ಪ್ರದೇಶ, ಕಾಫಿ, ಕಿತ್ತಳೆ ತೋಟಗಳು, ವ್ಯವಸಾಯದ ಭೂಮಿ ಹೊಂದಿದೆ. ಬೆಟ್ಟ ಪ್ರದೇಶದಲ್ಲಿ ವರ್ಷಕ್ಕೆ ಸುಮಾರು ೩೮೧೦ ಮಿ.ಮೀ. ಮಳೆಯಾದರೆ ಅಣೆಕಟ್ಟೆ ಸಮೀಪದ ಪ್ರದೇಶಗಳಲ್ಲಿ ವಾರ್ಷಿಕ ೧೨೩೪ ಮಿ.ಮೀ. ಮಳೆ ಬರುತ್ತದೆ. ಜೂನ್‌ನಿಂದ ಸೆಪ್ಟೆಂಬರ್ ತನಕ ಈ ಭಾಗದಲ್ಲಿ ಹೆಚ್ಚಿನ ಮಳೆ ಆಗುತ್ತದೆ. ನದಿಯಲ್ಲಿ ಪ್ರವಾಹದ ಸ್ಥಿತಿ ಉಂಟಾಗುತ್ತದೆ.
ಈ ಮೂರು ತಿಂಗಳುಗಳಲ್ಲಿ ಜಲಾಶಯವನ್ನು ಭರ್ತಿ ಮಾಡಿಕೊಳ್ಳಬೇಕಾಗುತ್ತದೆ. ಜಲಾಶಯ ಸಂಪೂರ್ಣ ತುಂಬಿದಾಗ ೧೩ ಗ್ರಾಮಗಳ ೪,೭೧೭ ಎಕರೆ ಜಾಗ ಮುಳುಗಡೆ ಆಗುತ್ತದೆ. ಜಲಾಶಯದ ನಾಲ್ಕು ಗೇಟ್‌ಗಳ ಮೂಲಕ ಗರಿಷ್ಠ ೧,೦೫,೦೦೦ ಕ್ಯೂಸೆಕ್ ನೀರನ್ನು ನದಿಗೆ ಹರಿಸಬಹುದಾಗಿದೆ.
ಮಹಾತ್ವಾಕಾಂಕ್ಷೆಯಿಂದ ನಿರ್ಮಾಣವಾದ ಅಣೆಕಟ್ಟೆಯಿಂದ ಈಗ ತಮಗೆ ಎಷ್ಟರ ಮಟ್ಟಿಗೆ ಪ್ರಯೋಜನ ಆಗುತ್ತಿದೆ ಎಂದು ರೈತರು ಪ್ರಶ್ನಿಸಿಕೊಳ್ಳುವಂತೆ ಆಗಿದೆ. ಸಾಮಾನ್ಯವಾಗಿ ಜುಲೈ ಮೊದಲ ವಾರದಲ್ಲಿ ಕಾಲುವೆಗಳಿಗೆ ನೀರು ಹರಿಸಿದರೆ ಭತ್ತ ಬೆಳೆಯುವ ರೈತರಿಗೆ ಅನುಕೂಲ ಆಗುತ್ತದೆ. ಮುಂಚಿತವಾಗಿ ನೀರು ಸಿಕ್ಕಿದರೆ ಭೂಮಿ ತಂಪಾಗುತ್ತದೆ. ಹೆಚ್ಚುವರಿ ನೀರು ಕಾಲುವೆಗಳ ಮೂಲಕ ಹರಿದು ಕೆರೆಗಳಿಗೆ ಸೇರುವ ಅವಕಾಶವೂ ಇರುತ್ತದೆ. ಆದರೆ ಇದಕ್ಕೆ ಹಾರಂಗಿ ಅಣೆಕಟ್ಟೆ ಅಧಿಕಾರಿಗಳು ಸಿದ್ಧತೆಯನ್ನೇ ನಡೆಸಿರುವುದಿಲ್ಲ. ಮೇ ಅಥವಾ ಜೂನ್‌ನಲ್ಲಿ ಕಾಲುವೆಗಳ ದುರಸ್ತಿ ಕಾರ್ಯ ಮುಗಿದಿರಬೇಕು. ಈಗ ನೋಡಿದರೆ ಜುಲೈ ಕೊನೆಯ ವಾರದ ಬಿರು ಮಳೆ ಮಧ್ಯೆಯೂ ಅಲ್ಲಲ್ಲಿ ಕಾಲುವೆಗಳ ದುರಸ್ತಿ ಕೆಲಸ ಕಂಡುಬರುತ್ತಿದೆ. ಆಗಸ್ಟ್ ೨ನೇ ವಾರದ ನಂತರ ಅಣೆಕಟ್ಟೆಯಿಂದ ಕಾಲುವೆಗಳಿಗೆ ನೀರು ಬಿಡಲಾಗುತ್ತದೆ. ಹೀಗಾದರೆ ಭತ್ತ ಬೆಳೆಯುವುದು ಹೇಗೆ ಎನ್ನುವುದು ರೈತರ ಪ್ರಶ್ನೆ.
ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ೨೯೨ ಕೆರೆಗಳು ಇವೆ. ಏಪ್ರಿಲ್‌ನಿಂದ ಜೂನ್ ತನಕ ಕಾಲುವೆಗಳ ದುರಸ್ತಿ ನಡೆಸಿ ಸುಸ್ಥಿತಿಯಲ್ಲಿ ಇಟ್ಟುಕೊಂಡರೆ ಮಳೆ ಆರಂಭವಾಗಿ ಅಣೆಕಟ್ಟೆಗೆ ಹೆಚ್ಚಿನ ನೀರು ಬರುತ್ತಿದ್ದಂತೆಯೇ ನದಿಗೆ ನೀರು ಹರಿಸುವ ಬದಲು ಕಾಲುವೆಗಳ ಮೂಲಕ ಈ ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಿದರೆ ಭತ್ತ ಬೆಳೆಯಲು ಅನುಕೂಲ ಆಗುತ್ತದೆ ಎನ್ನುವುದು ರೈತರ ಅಭಿಪ್ರಾಯ. ಈಗ ಮಳೆಗಾಲದಲ್ಲಿ ಅಣೆಕಟ್ಟೆ ನೀರು ನದಿಗೆ ಹರಿಸಿ, ಆಗಸ್ಟ್ ನಂತರ ಕಾಲುವೆಗಳಿಗೆ ಬಿಟ್ಟರೆ ಭತ್ತಕ್ಕೆ ಹೆಚ್ಚು ಅಗತ್ಯ ಇರುವ ಸಂದರ್ಭದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಇದು ಇಳುವರಿ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ರೈತರು. ಜಲಾಶಯದ ನೀರನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದಲ್ಲಿ ಮೊದಲಿನಂತೆ ೨ ಬೆಳೆಗೆ ಉಪಯೋಗಿಸಬಹುದು. ಪ್ರವಾಹವನ್ನೂ ತಡೆಗಟ್ಟಬಹುದು. ಇದಕ್ಕೆ ರೈತರನ್ನು ಒಳಗೊಂಡಂತೆ ತಜ್ಞರ ಸಮಿತಿ ರಚಿಸಿ ಕಾರ್ಯೋನ್ಮುಖವಾಗುವ ಅಗತ್ಯವಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.