ಮಡಿಕೇರಿ:
ಕಳೆದ 5 ದಿನಗಳಿಂದ ಸುರಿದ ಮಳೆಯಿಂದಾಗಿ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿಯ ಕಳೆ ಹೆಚ್ಚಿದೆ. ವರುಣನ ಅಬ್ಬರಕ್ಕೆ ಕೇವಲ 5 ದಿನಗಳಲ್ಲೇ ಬರೋಬ್ಬರಿ 14 ಅಡಿಗಳಷ್ಟು ನೀರು ಹರಿದು ಬಂದಿದೆ. ಜಲಾಶಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮೇ ತಿಂಗಳಿನಲ್ಲೇ ಈ ಪ್ರಮಾಣದಲ್ಲಿ ನೀರು ಸಂಗ್ರಹ ಆಗಿರುವುದು ಇದೇ ಮೊದಲು ಎನ್ನಲಾಗುತ್ತಿದ್ದು, ಸಂಪೂರ್ಣ ಭರ್ತಿ ಆಗಲು ಇನ್ನು 13 ಅಡಿಗಳಷ್ಟೇ ಬಾಕಿ ಇದೆ.
ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳ ಒಟ್ಟು 1,34,895 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಹಾರಂಗಿ ಜಲಾಶಯ ಸಂಪೂರ್ಣವಾಗಿ ಭರ್ತಿ ಆಗಲು ಸಾಮಾನ್ಯವಾಗಿ ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದ ತನಕ ಕಾಯಬೇಕಿತ್ತು. ಆದರೆ ಈ ವರ್ಷ ವಾಯುಭಾರ ಕುಸಿತದಿಂದಾಗಿ ಮುಂಗಾರಿಗಿAತಲೂ ಮೊದಲೇ ಮಳೆ ಅಬ್ಬರಿಸಿರುವುದರಿಂದ ಸಾಮಾನ್ಯ ಅವಧಿಗೂ ಮೊದಲೇ ಅಣೆಕಟ್ಟೆ ಭರ್ತಿ ಆಗುವ ಸೂಚನೆಗಳು ಕಾಣಿಸಿಕೊಂಡಿದೆ.
ಭಾನುವಾರದಿಂದ(ಮೇ25) ಈಚೆಗೆ ಜಿಲ್ಲೆಯಲ್ಲಿ ಎಡೆಬಿಡದೇ ಸುರಿಯುತ್ತಿದ್ದ ಮಳೆಯಿಂದಾಗಿ ಹಾರಂಗಿ ಅಣೆಕಟ್ಟೆಗೆ ಏಕಾಏಕಿ ಒಳಹರಿವು ಹೆಚ್ಚಾದ ಕಾರಣ ಜಲಾಶಯದಲ್ಲಿ ಮೇ ತಿಂಗಳಿನಲ್ಲೇ ದಾಖಲೆ ಪ್ರಮಾಣದಲ್ಲಿ ನೀರು ಸಂಗ್ರಹ ಆಗಿದೆ. ಕಳೆದ ಶನಿವಾರ (ಮೇ24) ತನಕವೂ ಅಣೆಕಟ್ಟೆಗೆ ಒಳಹರಿವು ಕೇವಲ 177 ಕ್ಯೂಸೆಕ್ ಇತ್ತು. ಶನಿವಾರ ರಾತ್ರಿಯಿಂದಲೇ ಮಳೆಯ ರಭಸ ಹೆಚ್ಚಾಗಿದ್ದು, ಭಾನುವಾರ ಬೆಳಗ್ಗೆ ಹಾರಂಗಿ ಒಳಹರಿವು 526 ಕ್ಯೂಸೆಕ್‌ಗೆ ಏರಿತು. ಈ ಸಂದರ್ಭದಲ್ಲಿ ಜಲಾಶಯದಲ್ಲಿ ನೀರಿನ ಮಟ್ಟ 2832.78 ಅಡಿಗಳಷ್ಟು ಇತ್ತು.
ಮೇ 25ರ ನಂತರ ಪ್ರತಿದಿನವೂ ಒಳಹರಿವಿನ ಪ್ರಮಾಣ ಏರಿಕೆ ಆಗುತ್ತಲೇ ಬಂದಿದೆ. ಮೇ 26ಕ್ಕೆ ಬೆಳಗ್ಗೆ 7 ಗಂಟೆಗೆ 2990 ಕ್ಯೂಸೆಕ್ ಇದ್ದ ಒಳಹರಿವು ಮೇ 27ರಂದು 3431 ಕ್ಯೂಸೆಕ್‌ಗೆ ಹೆಚ್ಚಾಯಿತು. ಬುಧವಾರ (ಮೇ 28) 3852 ಕ್ಯೂಸೆಕ್ ಒಳಹರಿವು ಇದ್ದರೆ, ಗುರುವಾರ (ಮೇ 29) 3299 ಕ್ಯೂಸೆಕ್‌ಗೆ ಇಳಿಯಿತು. ಶುಕ್ರವಾರ ಬೆಳಗ್ಗೆ 7 ಗಂಟೆ ಮಾಹಿತಿ ಪ್ರಕಾರ 7204 ಕ್ಯೂಸೆಕ್ ನೀರು ಅಣೆಕಟ್ಟೆಗೆ ಬರುತ್ತಿದೆ. ಮೇ 25ರಂದು 2832.78 ಅಡಿಗಳಷ್ಟು ಇದ್ದ ನೀರಿನ ಮಟ್ಟ ಶುಕ್ರವಾರ 2846.37 ಅಡಿಗಳಿಗೆ ತಲುಪಿದೆ.
ಹಾರಂಗಿ ಅಣೆಕಟ್ಟೆಯ ಗರಿಷ್ಠ ಎತ್ತರ 2859 ಅಡಿಗಳು. ಇನ್ನು 13 ಅಡಿ ನೀರು ಬಂದರೆ ಜಲಾಶಯ ಭರ್ತಿ ಆಗುತ್ತದೆ. ಹಾರಂಗಿಯ ಪ್ರಮುಖ ಜಲಮೂಲಗಳಾದ ಮಡಿಕೇರಿ, ಕಾಲೂರು, ಹೆಬ್ಬೆಟಗೇರಿ, ಮಕ್ಕಂದೂರು, ಮುಕ್ಕೋಡ್ಲು, ಹಟ್ಟಿಹೊಳೆ, ಹರದೂರು, ಹೇರೂರು ಭಾಗಗಳಲ್ಲಿ ಹೆಚ್ಚು ಮಳೆ ಆಗಿ ಶುಕ್ರವಾರದ ರೀತಿಯಲ್ಲಿ ಒಳಹರಿವು ಇದ್ದರೆ ಅಣೆಕಟ್ಟೆ ತುಂಬಲು ಹೆಚ್ಚು ದಿನ ಬೇಕಾಗಿಲ್ಲ. ಆದರೆ ಶುಕ್ರವಾರದಿಂದ ಜಿಲ್ಲೆಯಲ್ಲಿ ಮಳೆಯ ಅಬ್ಬರ ಸ್ವಲ್ಪ ಕಡಿಮೆ ಆಗಿದ್ದು, ಸಾಧಾರಣ ಮಳೆಯಷ್ಟೇ ಆಗುತ್ತಿದೆ.
8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ ಶುಕ್ರವಾರದ ಮಾಹಿತಿ ಪ್ರಕಾರ 4.359 ಟಿಎಂಸಿ ನೀರಿದೆ. ಕಳೆದ ವರ್ಷ ಇದೇ ದಿನ 2.286 ಟಿಎಂಸಿಯಷ್ಟು ಮಾತ್ರ ನೀರಿನ ಸಂಗ್ರಹ ಇತ್ತು. 2859 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಸದ್ಯ 2846.37 ಅಡಿಗಳಷ್ಟು ನೀರಿದೆ. ಕಳೆದ ವರ್ಷ 2824.10 ಅಡಿಯಷ್ಟು ನೀರು ಇತ್ತು. ಒಳಹರಿವು ಕೇವಲ 224 ಕ್ಯೂಸೆಕ್ ಆಗಿತ್ತು. ಈಗ 7204 ಕ್ಯೂಸೆಕ್ ನೀರಿನ ಒಳಹರಿವು ಇದೆ. ಕಳೆದ ವರ್ಷ ಅಣೆಕಟ್ಟೆ ಭರ್ತಿ ಆಗಲು ಇನ್ನೂ ಒಂದು ಅಡಿಯಷ್ಟು ನೀರು ಬಾಕಿ ಇದ್ದಂತೆಯೇ ಜುಲೈ 8ಕ್ಕೆ ನದಿಗೆ ನೀರು ಹರಿಸಲಾಗಿತ್ತು.
ಸಾಮಾನ್ಯವಾಗಿ ಮಳೆಗಾಲ ಆರಂಭವಾಗುವಾಗ ಜಲಾಶಯ ಖಾಲಿ ಇರುತ್ತದೆ. ಆದರೆ ಈ ವರ್ಷ ಅಂಥ ಪರಿಸ್ಥಿತಿ ಇರಲಿಲ್ಲ. ಅಣೆಕಟ್ಟೆ ಬಹುತೇಕ ತುಂಬಿಕೊAಡAತೆ ಇತ್ತು. 2859 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಮೇ20 ರಂದು 2831.65 ಅಡಿಗಳಷ್ಟು ನೀರಿತ್ತು. ಆದರೆ 2024ರ ಮೇ 20ಕ್ಕೆ 2823.09 ಅಡಿಗಳಷ್ಟು ನೀರಿನ ಸಂಗ್ರಹ ಇತ್ತು. ಹಾಗಾಗಿ ಜೋರಾದ ಮಳೆ ಮಾತ್ರವಲ್ಲದೆ ಅಣೆಕಟ್ಟೆಯಲ್ಲಿ ಮೊದಲೇ ನೀರಿನ ಸಂಗ್ರಹ ಇದ್ದ ಕಾರಣಕ್ಕೂ ಹಾರಂಗಿ ಮೇ ತಿಂಗಳಿನಲ್ಲೇ ದಾಖಲೆ ಪ್ರಮಾಣದಲ್ಲಿ ತುಂಬಿದೆ ಎನ್ನುತ್ತಾರೆ ಅಧಿಕಾರಿಗಳು.
ಒಟ್ಟು 1,34,895 ಎಕರೆ ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಒಂದು ಬೆಳೆ ಬೆಳೆÀಯಲು ವರ್ಷಕ್ಕೆ 18 ಟಿಎಂಸಿ ನೀರು ಬೇಕಾಗುತ್ತದೆ. 8.5 ಟಿಎಂಸಿ ಸಾಮರ್ಥ್ಯದ ಜಲಾಶಯ 2 ಬಾರಿ ಗರಿಷ್ಠ ಪ್ರಮಾಣದಲ್ಲಿ ಭರ್ತಿ ಆದರೆ ಮಾತ್ರ ಅಚ್ಚುಕಟ್ಟು ಪ್ರದೇಶದ ರೈತರು ಮುಂಗಾರು ಹಂಗಾಮಿನಲ್ಲಿ ಸಮೃದ್ಧ ಬೆಳೆ ತೆಗೆಯಬಹುದು. ಆದರೆ ಬೇಸಿಗೆ ಬೆಳೆಗೆ ಹಾರಂಗಿಯಿAದ ನೀರು ಕೊಡುವುದನ್ನು ನಿಲ್ಲಿಸಿ 3 ದಶಕಗಳೇ ಕಳೆದಿದೆ. ಈ ಬಾರಿ ಅಣೆಕಟ್ಟೆ ಶೀಘ್ರವೇ ಸಂಪೂರ್ಣ ಭರ್ತಿ ಆಗುವ ಸಾಧ್ಯತೆಗಳು ಇರುವುದರಿಂದ ಮುಂದಿನ ಬೇಸಿಗೆಗೆ ನೀರು ಸಿಗುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ.
ಹಾರಂಗಿಗೆ ಹೆಚ್ಚು ನೀರು ಹರಿದು ಬಂದಷ್ಟೂ ಮಂಡ್ಯದ ಕೆಆರ್‌ಎಸ್‌ಗೆ ಲಾಭವಾಗಲಿದೆ. ಹಾರಂಗಿ ಜಲಾಶಯ ಭರ್ತಿ ಆಗುತ್ತಿದ್ದಂತೆಯೇ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತದೆ. ಹಾರಂಗಿ ನದಿ ಕುಶಾಲನಗರ ತಾಲೂಕು ಕೂಡಿಗೆ ಬಳಿ ಕಾವೇರಿ ನದಿಯನ್ನು ಸೇರಿಕೊಂಡು ಕೆಆರ್‌ಎಸ್ ಕಡೆಗೆ ಸಾಗುತ್ತದೆ. ಹಾಗಾಗಿ ಹಾರಂಗಿ ಬೇಗ ಭರ್ತಿ ಆದರೆ ಈ ಮೂಲಕ ಕೆಆರ್‌ಎಸ್ ತುಂಬುವಲ್ಲೂ ಸಹಾಯ ಆದಂತಾಗುತ್ತದೆ. ಈ ವರ್ಷ ಇಲ್ಲಿಯ ತನಕ ಹಾರಂಗಿ ಜಲಾಶಯದಿಂದ ಕಾವೇರಿ ಮೂಲಕ ಕೆಆರ್‌ಎಸ್‌ಗೆ 28.898 ಟಿಎಂಸಿ ನೀರು ಹರಿಸಲಾಗಿದೆ.