ಮಡಿಕೇರಿ:
ಕೊಡಗು ಸೇರಿದಂತೆ ಮೂರು ಜಿಲ್ಲೆಗಳ ಕೃಷಿ ಬದುಕನ್ನು ಹಸನಾಗಿಸುವ ಹಾರಂಗಿ ಜಲಾಶಯ ಭರ್ತಿ ಆಗಿದ್ದು, ಈಗಾಗಲೇ ನಾಲೆಗಳಿಗೆ ನೀರು ಬಿಡಲಾಗುತ್ತಿದೆ. ಕಳೆದ ಗುರುವಾರ (ಜು.17) ಬೆಂಗಳೂರಿನಲ್ಲಿ ನಡೆದ ಹಾರಂಗಿ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆ ನಿರ್ಧಾರದಂತೆ ಕಟ್ಟು ನೀರಿನ ಪದ್ಧತಿಯಲ್ಲಿ ಬೆಳೆಗಳಿಗೆ ನೀರು ಹರಿಸಲಾಗುತ್ತಿದೆ.
ಆದರೆ ನಾಲೆಯ ನೀರಿನ ಅವಲಂಬಿತ ದೀರ್ಘಾವಧಿ ಬೆಳೆಗಳನ್ನು ಬೆಳೆಯದೆ, ಮಳೆ ಅವಲಂಬಿತ ಅರೆ ಖುಷ್ಕಿ ಬೆಳೆಗಳನ್ನು ಮಾತ್ರ ಬೆಳೆಯಲು ಇಲಾಖೆ ವಿಶೇಷವಾಗಿ ಸೂಚನೆ ನೀಡಿದೆ.
ಹಾರಂಗಿ ಬಲದಂಡೆಯ ಒಟ್ಟು 67,332 ಎಕರೆ ಮತ್ತು ಎಡದಂಡೆ ನಾಲೆಯ ಒಟ್ಟು 1,34,895 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಅನುಕೂಲ ಆಗುವ ಉದ್ದೇಶದಿಂದ ಜಲಾಶಯದಿಂದ ಕಾಲುವೆಗಳಿಗೆ ಜು.17ರಿಂದಲೇ ನೀರು ಹರಿಸಲಾಗುತ್ತಿದೆ. ಈ ಬಾರಿ ಮೇ ತಿಂಗಳಿನಲ್ಲೇ ಜಲಾಶಯ ಭರ್ತಿ ಆಗಿದ್ದರೂ ಕೃಷಿ ಉದ್ದೇಶಕ್ಕೆ ನೀರು ಹರಿಸದಿರುವ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಹಾರಂಗಿ ಅಣೆಕಟ್ಟೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಬೆನ್ನಲ್ಲೇ ಜು.17ಕ್ಕೆ ಬೆಂಗಳೂರಿನಲ್ಲಿ ಹಾರಂಗಿ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿತ್ತು.
ಹಾರಂಗಿ ಯೋಜನೆಯಡಿಯಲ್ಲಿ 2025 ರ ಖಾರೀಫ್ ಬೆಳೆಗಳಿಗೆ ನಾಲೆಗಳಲ್ಲಿ ನೀರು ಹರಿಸುವ ಸಲುವಾಗಿ ಚರ್ಚಿಸಲು ಬೆಂಗಳೂರಿನ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಮಡಿಕೇರಿ ಶಾಸಕರೂ ಆಗಿರುವ ಹಾರಂಗಿ ಜಲಾಶಯ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷ ಡಾ. ಮಂತರ್ ಗೌಡ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಹಾರಂಗಿ ಜಲಾಶಯ ಅಚ್ಚುಕಟ್ಟು ಪ್ರದೇಶದ ಸಚಿವರು, ಶಾಸಕರು, ಅಧಿಕಾರಿ ಸದಸ್ಯರು ಮತ್ತು ಅಧಿಕಾರೇತರ ಸದಸ್ಯರು ಪಾಲ್ಗೊಂಡು ಚರ್ಚಿಸಿದ ನಂತರ ಜು. 17ರಿಂದಲೇ ಕಟ್ಟು ನೀರಿನ ಪದ್ಧತಿಯಲ್ಲಿ ಕಾಲುವೆಗಳಿಗೆ ನೀರು ಹರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಜಲಾಶಯದಲ್ಲಿ ಹಾಲಿ ಇರುವ ನೀರಿನ ಸಂಗ್ರಹಣೆ ಮತ್ತು 2025 ರ ಜುಲೈನಿಂದ 2025ರ ಡಿಸೆಂಬರ್ ತನಕ ಬರಬಹುದಾದ ಮಳೆ ಹಾಗೂ ಕಳೆದ 20 ವರ್ಷಗಳ ಕನಿಷ್ಠ ಒಳಹರಿವಿನ ಪ್ರಮಾಣ ಆಧರಿಸಿ, ನಿರೀಕ್ಷಿತ ಒಳಹರಿವಿನ ಪರಿಮಾಣ ಪರಿಗಣಿಸಿ ನೀರು ಬಿಡುವ ವೇಳಾಪಟ್ಟಿಯನ್ನು ತಯಾರಿಸಲಾಗಿದೆ.
ಆ.1ರ ತನಕ 15 ದಿನಗಳ ಕಾಲ ಅಚ್ಚುಕಟ್ಟು ವ್ಯಾಪ್ತಿಯ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆರೆ-ಕಟ್ಟೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ನಂತರ ಆ.2ರಿಂದ ಡಿ. 14ರ ತನಕ ಕಟ್ಟು ನೀರಿನ ಪದ್ಧತಿಯ ಆಧಾರದಲ್ಲಿ ಖಾರೀಫ್ 2025ರ ಬೆಳೆಗಳಿಗಾಗಿ ನಾಲೆಗಳಲ್ಲಿ ನೀರನ್ನು ಹರಿಸಲಾಗುತ್ತದೆ.
2025 ರ ಜು. 17 ರಿಂದ ಡಿ. 14 ರ ನಡುವಿನಲ್ಲಿ ಜು.17 ರಿಂದ ಆ. 16 ರವರೆಗೆ 30 ದಿನಗಳು, ಆ. 17ರಿಂದ ಆ.31 ರವರೆಗೆ 15 ದಿನಗಳು, ಸೆ. 1 ರಿಂದ ಸೆ. 15 ರವರೆಗೆ 15 ದಿನಗಳು, ಸೆ. 16 ರಿಂದ 30 ರವರೆಗೆ 15 ದಿನಗಳು, ಅ. 1 ರಿಂದ 15 ರವರೆಗೆ 15 ದಿನಗಳು, ಅ. 16 ರಿಂದ 30 ರವರೆಗೆ, ಅ. 31 ರಿಂದ ನ. 14 ರವರೆಗೆ, ನ. 15 ರಿಂದ ನ. 29 ರವರೆಗೆ, ನ. 30 ರಿಂದ ಡಿ. 14 ರವರೆಗೆ 15 ದಿನಗಳು... ಹೀಗೆ ಕಾಲುವೆಗಳಿಗೆ ಕಟ್ಟು ಪದ್ಧತಿ ಅನುಸರಿಸಿ ನೀರು ಹರಿಸಲಾಗುತ್ತದೆ.
ಹಾರಂಗಿ ಬಲದಂಡೆ ನಾಲೆ 0.00 ಯಿಂದ 21.175 ಕಿ.ಮೀ.ವರೆಗೆ ಭತ್ತ ವಿತರಣಾ ನಾಲೆ 1 ರಿಂದ 10, ವಿತರಣಾ ಸಂ.1 ರಿಂದ 98ರ 21.75 ರಿಂದ 138.40 ಕಿ.ಮೀ. ಅರೆ ನೀರಾವರಿ, ಭತ್ತ 7,632 ಎಕರೆ, ಅರೆ ನೀರಾವರಿ 59,700 ಸೇರಿದಂತೆ ಒಟ್ಟು 67,332 ಎಕರೆ ಮತ್ತು ಹಾರಂಗಿ ಎಡದಂಡೆ ನಾಲೆ 0.00 ಯಿಂದ 54.94 ಕಿ.,ಮೀ. ವರೆಗೆ ಭತ್ತ, ವಿತರಣಾ ನಾಲೆ 1 ರಿಂದ 29 ರವರೆಗೆ 54.94 ಕಿ.ಮೀ.ನಿಂದ 153.00 ವರೆಗೆ ವಿತರಣಾ ನಾಲೆ 30 ರಿಂದ 90 ರವರೆಗೆ ಅರೆ ನೀರಾವರಿ ಭತ್ತ 7935 ಎಕರೆ, ಅರೆ ನೀರಾವರಿ 25,528 ಎಕರೆ ಒಟ್ಟು 33,463 ಎಕರೆ, ಸೋಮವಾರಪೇಟೆ ಏತ ನೀರಾವರಿ ಯೋಜನೆ ಭತ್ತ 1,500 ಎಕರೆ ಪಿರಿಯಾಪಟ್ಟಣ ಏತ ನೀರಾವರಿ ಯೋಜನೆ 0.00 ರಿಂದ 50 ಕಿ.ಮೀ.ವರೆಗೆ 1 ರಿಂದ 38 ವಿತರಣಾ ನಾಲೆಗಳು ಅರೆ ನೀರಾವರಿ 30,000 ಎಕರೆ, ಒಟ್ಟು ಭತ್ತ 17,067 ಎಕರೆ, ಅರೆ ನೀರಾವರಿ 1,15,228, ಸಣ್ಣ ನೀರಾವರಿ ಕೆರೆಗಳು 2,600 ಎಕರೆ ಒಟ್ಟು 1,34,895 ಎಕರೆಗೆ ನೀರು ಹರಿಸಲಾಗುತ್ತಿದೆ.
ವಿಶೇಷ ಎಂದರೆ ನಾಲೆಯ ನೀರಿನ ಅವಲಂಬಿತ ದೀರ್ಘಾವಧಿ ಬೆಳೆಗಳನ್ನು ಬೆಳೆಯದೆ, ಮಳೆ ಅವಲಂಬಿತ ಅರೆ ಖುಷ್ಕಿ ಬೆಳೆಗಳನ್ನು ಮಾತ್ರ ಬೆಳೆಯಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಒಂದು ವೇಳೆ ಸೂಚನೆ ಉಲ್ಲಂಘಿಸಿ ದೀರ್ಘಾವಧಿ ಬೆಳೆಗಳನ್ನು ಬೆಳೆದಲ್ಲಿ ನೀರು ಹರಿಸುವುದರ ವಿಷಯವಾಗಿ ಕಾವೇರಿ ನೀರಾವರಿ ನಿಗಮ ಯಾವುದೇ ರೀತಿಯಲ್ಲಿಯೂ ಜವಾಬ್ದಾರರಲ್ಲವೆಂದು ಕೂಡ ಸ್ಪಷ್ಟನೆ ನೀಡಲಾಗಿದೆ.
ಜಲಾಶಯಕ್ಕೆ ಒಳಹರಿವು ಕ್ಷೀಣಿಸಿದ್ದಲ್ಲಿ ನೀರು ಬಿಡುವ ವೇಳಾ ಪಟ್ಟಿ ಪರಿಷ್ಕರಣೆ ಆಗುವ ಸಾಧ್ಯತೆಯೂ ಇದೆ. ಈ ಸಂಬAಧ ಉಂಟಾಗಬಹುದಾದ ಬೆಳೆ ಹಾನಿಗೆ ಕಾವೇರಿ ನೀರಾವರಿ ನಿಗಮ ಜವಾಬ್ದಾರರಾಗುವುದಿಲ್ಲ್ಲ ಎನ್ನುವ ಸ್ಪಷ್ಟನೆಯನ್ನೂ ರೈತರಿಗೆ ಕೊಡಲಾಗಿದೆ.
ಮಡಿಕೇರಿ ಶಾಸಕರೂ ಆಗಿರುವ ಹಾರಂಗಿ ಜಲಾಶಯ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷ ಡಾ. ಮಂತರ್ ಗೌಡ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಹಾರಂಗಿ ಯೋಜನೆಯಡಿಯಲ್ಲಿ 2025 ರ ಖಾರೀಫ್ ಬೆಳೆಗಳಿಗೆ ನಾಲೆಗಳಲ್ಲಿ ನೀರು ಹರಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಜು. 17ರಿಂದಲೇ ಕಟ್ಟು ನೀರಿನ ಪದ್ಧತಿಯಲ್ಲಿ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ನಾಲೆಯ ನೀರಿನ ಅವಲಂಬಿತ ದೀರ್ಘಾವಧಿ ಬೆಳೆಗಳನ್ನು ಬೆಳೆಯದೆ, ಮಳೆ ಅವಲಂಬಿತ ಅರೆ ಖುಷ್ಕಿ ಬೆಳೆಗಳನ್ನು ಮಾತ್ರ ಬೆಳೆಯಲು ಸೂಚನೆ ನೀಡಲಾಗಿದೆ.
ಐ.ಕೆ. ಪುಟ್ಟಸ್ವಾಮಿ, ಇಇ, ಹಾರಂಗಿ ಪುನರ್ವಸತಿ ವಿಭಾಗ, ಕಾವೇರಿ ನೀರಾವರಿ ನಿಗಮ
ನಾಲೆಯ ನೀರಿನ ಅವಲಂಬಿತ ದೀರ್ಘಾವಧಿ ಬೆಳೆಗಳನ್ನು ಬೆಳೆಯದೆ, ಮಳೆ ಅವಲಂಬಿತ ಅರೆ ಖುಷ್ಕಿ ಬೆಳೆಗಳನ್ನು ಮಾತ್ರ ಬೆಳೆಯಲು ಕಾನೂನು ಪ್ರಕಾರವೇ ಸೂಚನೆ ನೀಡಲಾಗಿದೆ. ಆದರೆ ಕೊಡಗು, ಅರಕಲಗೂಡು ತಾಲೂಕು ಹಾಗೂ ಪಿರಿಯಾಪಟ್ಟಣ ತಾಲೂಕಿನ ಅರ್ಧ ಭಾಗದಲ್ಲಿ ದೀರ್ಘಾವಧಿ ಬೆಳೆ ಬೆಳೆಯುವ ಅವಕಾಶ ಇದೆ. ಇದನ್ನು ಹೊರತುಪಡಿಸಿದರೆ ಉಳಿದ ಅಚ್ಚುಕಟ್ಟು ಪ್ರದೇಶದಲ್ಲಿ ಅರೆ ಖುಷ್ಕಿ ಬೆಳೆಗಳನ್ನು ಮಾತ್ರ ಬೆಳೆಯಲು ಮಾತ್ರ ಸಾಧ್ಯವಾಗುತ್ತದೆ. ಹಾಗಾಗಿಯೇ ಅಧಿಕಾರಿಗಳು ಈ ಸೂಚನೆ ಕೊಟ್ಟಿದ್ದಾರೆ.
ಚೌಡೇಗೌಡ, ಅಧ್ಯಕ್ಷ, ಹಾರಂಗಿ ನೀರು ಬಳಕೆದಾರರ ಒಕ್ಕೂಟ