ಹುಬ್ಬಳ್ಳಿ: ನಾನು 6 ತಿಂಗಳು ಮುಂಚೆಯೇ ಹೇಳಿದಂತೆ ಜಗದೀಶ ಶೆಟ್ಟರ್ ಅವರು ಮರಳಿ ಬಿಜೆಪಿಗೆ ಬಂದಿದ್ದಾರೆ. ಅವರು ಬಂದಿರುವುದು ಒಳ್ಳೆಯದು ಹಾಗೂ ನನಗೆ ಬಹಳಷ್ಟು ಖುಷಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಪಕ್ಷ ಸೇರ್ಪಡೆಯಾಗುವಾಗ ನನಗೆ ಬೇರೆ ರೀತಿಯ ಸಭೆಗಳು ನಿಗದಿಯಾಗಿದ್ದವು. ಹಾಗಾಗಿ ಕಾರ್ಯಕ್ರಮಕ್ಕೆ ಬರಲಿಲ್ಲ. ಆದರೆ, ಕೇಂದ್ರ ಗೃಹ ಮಂತ್ರಿ ಅಮಿತ್‌ಶಾ ಅವರು ಈ ವಿಷಯ ನನಗೆ ತಿಳಿಸಿದ್ದರು. ಸ್ಥಳೀಯ ನಾಯಕರಿಂದಲೂ ಮಾಹಿತಿ ಪಡೆದಿದ್ದರು ಎಂದರು.
ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸುವ ಕೆಲಸ ಮಾಡುತ್ತೇವೆ. ನಾವು ಈ ಹಿಂದೆ 26ಜನ ಸಂಸದರನ್ನು ಗೆಲ್ಲಿಸಿದ್ದೆವು. ಈಗ 28 ಜನರನ್ನೂ ಗೆಲ್ಲಿಸಲು ಪ್ರಯತ್ನಿಸುತ್ತೇವೆ. ಲಿಂಗಾಯತ ಟ್ರಂಪ್ ಕಾರ್ಡ್ ಅಂತೇನಿಲ್ಲ, ಎಲ್ಲ ಸಮುದಾಯದವರೂ ನಮಗೆ ಬೇಕು. ಲೋಕಸಭಾ ಅಭ್ಯರ್ಥಿಗಳ ವಿಷಯವಾಗಿ ಗೊಂದಲ ಬೇಡ. ಈಗಾಗಲೇ ನಾವು ಕ್ಷೇತ್ರದಲ್ಲಿ ತಯಾರಿ ನಡೆಸಿದ್ದೇವೆ ಎಂದರು.
ಲಕ್ಷ್ಮಣ ಸವದಿ ಅವರಲ್ಲಿ ಬಿಜೆಪಿಯ ವೈಚಾರಿಕ ರಕ್ತವಿದೆ. ಅವರು ಮರಳಿ ಪಕ್ಷಕ್ಕೆ ಬಂದರೂ ಸಂತೋಷ. ಗಾಲಿ ಜನಾರ್ದನರೆಡ್ಡಿ ಬಂದರೂ ಖುಷಿ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಆಂತರಿಕ ಕಚ್ಚಾಟವಿದೆ. ಐದು ವರ್ಷ ಆಡಳಿತ ನಡೆಸಲು ಜನರು ಆಶೀರ್ವಾದ ಮಾಡಿದ್ದಾರೆ. ಅವರು ಸರಿಯಾಗಿ ನಡೆಸುತ್ತಿಲ್ಲವಾದ್ದರಿಂದ ಜನರಿಗೆ ಹಾಗೂ ನಮಗೂ ಆಕ್ರೋಶವಿದೆ ಎಂದರು.
ಇಂಡಿಯಾ ಒಕ್ಕೂಟದಿಂದ ಆಮ್ ಆದ್ಮಿ ಪಕ್ಷ ಏಕೆ ಹೊರಬಂತು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ ಅವರು ಅಬಕಾರಿ ಹಗರಣದಲ್ಲಿ ದಾರಿ ತಪ್ಪಿಸುತ್ತಿದ್ದಾರೆ. ಅವರು ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುತ್ತೇವೆಂದು ಬಂದು, ಭ್ರಷ್ಟಾಚಾರದಲ್ಲಿಯೇ ಜೀವನ ನಡೆಸುತ್ತಿದಾರೆ. ನಾಚಿಕೆ ಆಗಬೇಕು ಕೇಜ್ರೀವಾಲ್‌ಗೆ ಎಂದು ಜೋಶಿ ತಿವಿದರು.