ರಾಯಚೂರು: ಜಗತ್ತಿನ ಬೆರಳೆಣಿಯಷ್ಟು ಆಶು ಕವಿಗಳಲ್ಲಿ ಸಂತ ಸರ್ವಜ್ಞ ಮೊದಲಿಗರಾಗಿದ್ದು, ಅವರ ತ್ರಿಪದಿಗಳ ಮೂಲಕ ದೊರೆಯುವ ಜ್ಞಾನದಿಂದ ಜೀವನದಲ್ಲಿ ಸುಖ ಸಂತೋಷಗಳನ್ನು ಕಾಣಬಹುದಾಗಿದೆ ಎಂದು ಸಹಾಯಕ ಆಯುಕ್ತ ಎಸ್.ಎಸ್.ಸಂಪಗಾವಿ ಹೇಳಿದರು.
ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಏರ್ಪಡಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ವಜ್ಞರು ಸುಮಾರು ಸಾವಿರಕ್ಕೂ ಹೆಚ್ಚು ವಚನ ಮತ್ತು ತ್ರಿಪದಿಗಳನ್ನು ರಚಿಸಿದ್ದು, ಅವುಗಳಲ್ಲಿ ಅರಿವು ಮೂಡಿಸುವ ಮತ್ತು ಅನುಭವ ತೋರಿಸುವ ಕೆಲಸ ಮಾಡಿದ್ದಾರೆ ಎಂದರು.
ತಹಸೀಲ್ದಾರ್ ಸುರೇಶ ವರ್ಮಾ ಮಾತನಾಡಿ, ಸರ್ವಜ್ಞರು ತ್ರಿಪದಿಗಳ ಮೂಲಕ ಸಮಾಜವನ್ನು ಬಡಿದೆಬ್ಬಿಸುವ ಕೆಲಸ ಮಾಡಿದ್ದಾರೆ. ಅವರ ವಚನಗಳು ಸಮಾಜದ ಎಲ್ಲ ವರ್ಗದ ಜನರ ಜೀವನಕ್ಕೆ ಮಾರ್ಗದರ್ಶಕವಾಗಿವೆ. ವೌಢ್ಯತೆಯನು ಹೋಗಲಾಡಿಸುವುದರ ಜತೆಗೆ ಶಿಕ್ಷಣದಿಂದ ನಿರ್ಭಯ ಬದುಕು ನಡೆಸಬಹುದಾಗಿದೆ ಎನ್ನುವ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ವೈ.ಸುರೇಂದ್ರಬಾಬು ಮಾತನಾಡಿ, 16ನೇ ಶತಮಾನದ ಶ್ರೇಷ್ಠ ವಚನಕಾರರಲ್ಲಿ ಸರ್ವಜ್ಞರು ಒಬ್ಬರು. ತಮ್ಮ ಅರ್ಥಪೂರ್ಣ ತ್ರಿಪದಿಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಪರ ಜಿಲ್ಲಾಕಾರಿ ಅಶೋಕ ದುಡಗುಂಟಿ ಕಾರ್ಯಕ್ರಮ ಉದ್ಘಾಟಿಸಿದರು. ಇದಕ್ಕೂ ಮುಂಚೆ ಅಂಬೇಡ್ಕರ್ ವೃತ್ತದಿಂದ ರಂಗಮಂದಿರದವರೆಗೆ ಮಂಗಳವಾದ್ಯಗಳೊಂದಿಗೆ ಸರ್ವಜ್ಞರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಸಮಾಜದ ಮುಖಂಡರಾದ ಚೆನ್ನಣ್ಣಗೌಡ, ರಾಮು, ಶಿವರಾಜಪ್ಪ, ವೀರಭದ್ರಪ್ಪ, ಭೀಮಪ್ಪ ಉಪಸ್ಥಿತರಿದ್ದರು.