ಜಿಲ್ಲೆ

ಮಲೆಮಹದೇಶ್ವರ ಬೆಟ್ಟಕ್ಕೆ ಸಚಿವ ವಿ. ಸೋಮಣ್ಣ ಭೇಟಿ

ಎ. ಆರ್. ರಘುರಾಮ

ಹನೂರು : ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಶ್ರೀ ಮಾದಪ್ಪನ ಸನ್ನಿಧಿಗೆ ಶುಕ್ರವಾರ ರೈಲ್ವೆ ಮತ್ತು ಜಲಶಕ್ತಿ ಕೇಂದ್ರ ರಾಜ್ಯ ಸಚಿವ ವಿ. ಸೋಮಣ್ಣ ಅವರು ಪತ್ನಿ ಶೈಲಜಾ ಹಾಗೂ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಬೆಳಗ್ಗೆ 11.30ರ ವೇಳೆಯಲ್ಲಿ ಶಾಸಕ ಎಂ.ಆರ್ ಮಂಜುನಾಥ್, ಬಿಜೆಪಿ ಮುಖಂಡ ಡಾ.ಎಸ್ ದತ್ತೇಶ್‌ಕುಮಾರ್, ಅಭಿಮಾನಿಗಳು ಹಾಗೂ ಕುಟುಂಬಸ್ಥರೊಂದಿಗೆ ಸನ್ನಿಧಿಗೆ ಆಗಮಿಸಿದ ಸಚಿವರನ್ನು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಅರ್ಚಕರು ವಾದ್ಯಮೇಳದೊಂದಿಗೆ ಬರಮಾಡಿಕೊಂಡರು. ಬಳಿಕ ಸಚಿವರು ದೇಗುಲದ ಸುತ್ತಾ ಪ್ರದಕ್ಷಿಣೆ ಹಾಕಿ ದೇವರ ದರ್ಶನ ಪಡೆದು ಪ್ರಾರ್ಥಿಸಿದರು. ಈ ವೇಳೆ ಅರ್ಚಕರು ಮಂತ್ರ ಘೋಷದೊಂದಿಗೆ ಪೂಜೆ ನೆರವೇರಿಸಿದರು. ಬಳಿಕ ಫಲ, ತಾಂಬೂಲ ನೀಡಿ ಗೌರವಿಸಲಾಯಿತು. ದೇಗುಲದ ಒಳಾಂಗಣದ ಕಚೇರಿಗೆ ಆಗಮಿಸಿದ ಸಚಿವರು, ಮ.ಬೆಟ್ಟದ ಅಭಿವೃದ್ಧಿಯ ಬಗ್ಗೆ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಅವರಿಂದ ಮಾಹಿತಿ ಪಡೆದರು.

ತಮಿಳುನಾಡು ಶಾಸಕ ಮನವಿ: ಇದೇ ವೇಳೆ ರೈಲ್ವೆ ಸಮಯ ಬದಲಾವಣೆ, ಯೋಜನೆಗೆ ಅನುದಾನ ನೀಡುವಿಕೆ ಹಾಗೂ ಇನ್ನಿತರೆ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡಿನ ಮೆಟ್ಟೂರು ಶಾಸಕ ಎಸ್. ಸದಾಶಿವಂ ಅವರು ಸಚಿವ ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು. ಅಗತ್ಯ ಕ್ರಮ ವಹಿಸುವುದಾಗಿಸಚಿವರು ಭರವಸೆ ನೀಡಿದರು. ಇದಕ್ಕೂ ಮೊದಲು ಗಿರಿದರ್ಶಿನಿ ಭವನದಲ್ಲಿ ಭಾರತೀಯ ಕಿಸಾನ್ ಸಂಘದ ಹನೂರು ಘಟಕದ ಪದಾಧಿಕಾರಿಗಳು, ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಸಲ್ಲಿಸಿದ ಮನವಿಗೆ ಸೂಕ್ತ ಭರವಸೆ ನೀಡಿದರು.

ಸಾಲೂರು ಮಠಕ್ಕೂ ಭೇಟಿ:

ಸಾಲೂರು ಬೃಹನ್ಮಠಕ್ಕೆ ಆಗಮಿಸಿದ ಸಚಿವರು, ಆವರಣದಲ್ಲಿನ ಲಿಂಗೈಕ್ಯ ಪಟ್ಟದ ಗುರುಸ್ವಾಮೀಜಿ ಗದ್ದುಗೆ ತೆರಳಿ ಪೂಜೆ ಸಲ್ಲಿಸಿದರು. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಾದ ಪಡೆದರು. ಈ ವೇಳೆ ಮಠದ ಅಭಿವೃದ್ಧಿಯ ಬಗ್ಗೆ ಕೆಲಕಾಲ ಚರ್ಚಿಸಲಾಯಿತು.

ಹನೂರಿನಲ್ಲಿ ಕೇಕ್ ಕತ್ತರಿಸಿ ಸಂಭ್ರಮ: ಮ.ಬೆಟ್ಟಕ್ಕೆ ತೆರಳುವ ಮೊದಲು ಹನೂರು ಪಟ್ಟಣಕ್ಕೆ ಆಗಮಿಸಿದ ಸಚಿವರನ್ನು ಅಭಿಮಾನಿಗಳು ಪಟಾಕಿ ಸಿಡಿಸಿ ಹೂವಿನ ಹಾರ ಹಾಕಿ ಆತ್ಮೀಯವಾಗಿ ಸ್ವಾಗತಿಸಿದರು. ಜು.20 ರಂದು ಸಚಿವರ ಜನ್ಮದಿನ ಇರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಚಿವ ವಿ. ಸೋಮಣ್ಣ ಅವರಿಗೆ ಕೇಕ್ ತಿನ್ನಿಸುವುದರ ಮೂಲಕ ಸಂಭ್ರಮಿಸಿದರು. ಸಚಿವರು ಉಪಹಾರ ವಿತರಿಸುವುದರ ಮೂಲಕ ಅಭಿಮಾನಿಗಳಿಗೆ ಸಾಥ್ ನೀಡಿದರು.