ಹನೂರು: ತಾಲೂಕಿನ ತಮಿಳುನಾಡು ಗಡಿ ಅಡಿಪಾಲಾರ್ ಬಳಿಯ ಕಾವೇರಿ ನದಿಯಲ್ಲಿ ಶುಕ್ರವಾರ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನ ಮೂಡಿದೆ.
ತಮಿಳುನಾಡಿನ ಗೋವಿಂದಪಾಡಿ ಗ್ರಾಮದ ರಾಜ (45) ಮೃತರು. ತಾಲೂಕಿನ ಗೋಪಿನಾಥಂ ಸಮೀಪದ ಅಡಿಪಾಲಾರ್ ಅರಣ್ಯ ಪ್ರದೇಶದಲ್ಲಿ 14ರಂದು ರಾತ್ರಿ ನಾಲ್ವರು ಬೇಟೆಗಾರರು ಜಿಂಕೆ ಬೇಟೆಯಾಡಲು ಬಂದಿದ್ದು, ಬಂದೂಕಿನ ಗುಂಡಿನ ಶಬ್ದ ಕೇಳಿದ ಕೂಡಲೇ ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಬೇಟೆಗಾರರು ವಿಚಲಿತರಾಗಿ ಅರಣ್ಯ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿದಾಳಿ ಸಹ ನಡೆದಿತ್ತು. ಆದರೆ, ಆರೋಪಿಗಳು ಪರಾರಿಯಾಗಿದ್ದರು.
ಈ ವೇಳೆ ನಾಡ ಬಂದೂಕು ಹಾಗೂ 2 ಮೃತ ಜಿಂಕೆಗಳ್ನು ವಶಪಡಿಸಿಕೊಂಡಿದ್ದ ಅರಣ್ಯ ಇಲಾಖೆ ಅಕಾರಿಗಳು ಮ.ಬೆಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಶುಕ್ರವಾರ ಕಾವೇರಿ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಮೃತನು ಗುಂಡಿನ ದಾಳಿಯಿಂದ ಸಾವಿಗೀಡಾಗಿದ್ದಾನೋ ಅಥವಾ ನೀರಿನಲ್ಲಿ ಮುಳುಗಿ ಅಸುನೀಗಿದ್ದಾನೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ತನಿಖೆಯಿಂದ ದೃಢಪಡಬೇಕಿದೆ.ತಮಿಳುನಾಡು ಶಾಸಕ ಸದಾಶಿವಂ ಸ್ಥಳಕ್ಕೆ ತೆರಳಿ ಪೊಲೀಸರೊಂದಿಗೆ ಚರ್ಚಿಸಿದರು. ಬಳಿಕ ಮೃತದೇಹವನ್ನು ತಮಿಳುನಾಡಿನ ಸೇಲಂ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.
ಘಟನೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಪಾಲಾರ್ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನಿಯೋಜಿಸಿ ಅಂತಾರಾಜ್ಯ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. ಎಎಸ್ಪಿ ಉದೇಶ್ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸಿಬ್ಬಂದಿಗೆ ಸೂಚಿಸಿದರು. ಚೆಕ್‌ಪೋಸ್ಟ್ ಬಳಿ ಇನ್ಸ್‌ಪೆಕ್ಟರ್‌ಗಳಾದ ಸಂತೋಷ್ ಕಶ್ಯಪ್, ಶಶಿಕುಮಾರ್, ಎಸೈಗಳಾದ ಗಣೇಶ್, ಮಹೇಶ್, ರಾಮಸ್ವಾಮಿ ಇತರರು ಕೆಎಸ್‌ಆರ್‌ಪಿ, ಡಿಆರ್ ವ್ಯಾನ್ ಸಮೇತ ಮೊಕ್ಕಾಂ ಹೂಡಿದ್ದಾರೆ.
2014ರಲ್ಲೂ ನಡೆದಿತ್ತು: ಗೋವಿಂದಪಾಡಿ ಗ್ರಾಮದ ಪಳನಿ ಎಂಬಾತ 2014, ಅ.21 ರಂದು ಅದೇ ಗ್ರಾಮದ ಮುತ್ತುಸ್ವಾಮಿ, ರಾಜು ಸೇರಿದಂತೆ ಮೂವರೊಂದಿಗೆ ಅಡಿಪಾಲಾರ್ ಅರಣ್ಯ ಪ್ರದೇಶಕ್ಕೆ ತೆರಳಿ 2 ಜಿಂಕೆಯನ್ನು ಕೊಂದು ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಕಾರಿಗಳು ಹಾಗೂ ಬೇಟೆಗಾರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಬೇಟೆಗಾರರು ಪರಾರಿಯಾಗಿದ್ದರು. ಬಳಿಕ ಪಳನಿ ಮೃತದೇಹ ಕಾವೇರಿ ನದಿಯಲ್ಲಿ ಪತ್ತೆಯಾಗಿತ್ತು. ಈ ವೇಳೆ ಆಕ್ರೋಶಗೊಂಡ ಗೋವಿಂದಪಾಡಿ ಗ್ರಾಮಸ್ಥರು, ಪಾಲಾರ್ ಚೆಕ್‌ಪೋಸ್ಟ್ ಹಾಗೂ ಕಚೇರಿಯನ್ನು ಧ್ವಂಸಗೊಳಿಸಿದ್ದರು. ಈ ಸಂಬಂಧ ಅಂದಿನ ಆರ್‌ಎ್ಒ ಸಂದೀಪ್ ಮ.ಬೆಟ್ಟದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಮತ್ತೆ ಇಂತಹ ಘಟನೆ ಮರುಕಳುಹಿಸಿದೆ.