ಜಿಲ್ಲೆ

ಮತ್ತದೇ ನಿರೀಕ್ಷೆಯ ಸುಳಿಗೆ ಸಿಲುಕಿದ ಬದುಕು

ಕಿರಣ್ ಮಾದರಹಳ್ಳಿ
‘ಇಂಡಿಗನತ್ತ ಮತಗಟ್ಟೆ ಧ್ವಂಸ’ ಪ್ರಕರಣ ಗ್ರಾಮಸ್ಥರ ಮೇಲೆ ಬೀರಿರುವ ಪರಿಣಾಮಗಳನ್ನು ‘ಕುಗ್ರಾಮ ಬವಣೆ’ ಸರಣಿ ವರದಿ ತೆರೆದಿಟ್ಟಿತು. ಮೇ 20ರಂದು ‘ಇಂಡಿಗನತ್ತ ಮೇಲೆ ಕ್ರೆಡಿಟ್ ರಾಜಕಾರಣ’ ಶೀರ್ಷಿಕೆಯಡಿ ಪ್ರಕಟಗೊಂಡ ವಿಶೇಷ ವರದಿಯೊಂದಿಗೆ ಮೂಲ ಸೌಕರ್ಯ ವಂಚಿತ ಜನರ ಧ್ವನಿಯನ್ನು ಅಕ್ಷರ ರೂಪಕ್ಕಿಳಿಸಿ ಗಮನ ಸೆಳೆಯುವ ಹಲವು ವಿಶೇಷ ವರದಿಗಳು ಈ ಸರಣಿಯಲ್ಲಿ ಪ್ರಕಟಗೊಂಡವು. ವರದಿ ಪರಿಣಾಮವೂ ಬೀರಿತು. ಇದೀಗ ಸರಣಿ ವರದಿ ಸವಲತ್ತುಗಳು ಸಿಗುವ ಭರವಸೆಯಲ್ಲಿರುವ ಗ್ರಾಮಸ್ಥರ ನಿರೀಕ್ಷೆಯೊಂದಿಗೆ ‘ಕುಗ್ರಾಮ ಬವಣೆ’ ಸರಣಿ ಇಂದಿಗೆ ಸಮಾಪ್ತಿಗೊಂಡಿದೆ.

ಎಸ್.ಲಿಂಗರಾಜು ಮಂಗಲ ಹನೂರು
ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದಿದ್ದರೂ ಸಿಗದ ಮೂಲಸೌಕರ್ಯಗಳಿಗಾಗಿ ಕಾದು, ರೊಚ್ಚಿಗೆದ್ದು ಮತಗಟ್ಟೆ ಧ್ವಂಸಗೊಳಿಸಿ ಠಾಣೆ, ಜೈಲು ನೋಡಿ ಬಂದರೂ ಮತ್ತದೇ ನಿರೀಕ್ಷೆಯ ಸುಳಿಯಲ್ಲಿ ಬದುಕು ಸಿಲುಕಿದೆ.
ಹನೂರ ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಲೋಕಸಭೆ ಚುನಾವಣೆ ಮತದಾನದ ದಿನ ಗಲಭೆ ನಡೆಯುವ ಹಂತಕ್ಕೆ ಹೋದರೂ ಮೂಲಸೌಕರ್ಯ ಸಿಗುವುದು ಮರೀಚಿಕೆಯಷ್ಟೆ. ರಸ್ತೆ, ಕುಡಿಯುವ ನೀರು, ವಿದ್ಯುತ್ ಇನ್ನಿತರೆ ಸೌಲಭ್ಯಗಳಿಗಾಗಿ ತಾಳ್ಮೆಯಿಂದ ಕಾದು, ಕೊನೆಗೆ ಸಿಟ್ಟಿಗೆದ್ದು ಮತಗಟ್ಟೆಯನ್ನೇ ಧ್ವಂಸಗೊಳಿಸಿದ ಇಂಡಿಗನತ್ತ ಗ್ರಾಮಸ್ಥರು ಕಾನೂನು ಉಲ್ಲಂಘನೆ ಮಾಡಿದರು. ಮೆಂದಾರೆಯ ಸೋಲಿಗರು ಕಲ್ಲೇಟು ತಿಂದು ನೋವು ಪಟ್ಟರು. ಇಬ್ಬರೂ ಇಷ್ಟೆಲ್ಲಾ ಕಷ್ಟಪಟ್ಟರೂ ಮೂಲಸೌಕರ್ಯಗಳು ಸಿಗುವ ಭರವಸೆ ಮೊದಲಿನಂತೆ ಭರವಸೆಯಾಗಿಯೇ ಇದೆ.
ಮತ್ತದೇ ನಿರೀಕ್ಷೆಯಲ್ಲಿ: ಇಲ್ಲಿನ ಜನರು ಕಲ್ಲು ಮುಳ್ಳಿನ ಅರಣ್ಯ ಪ್ರದೇಶದ ಹಾದಿಯಲ್ಲಿ ಸಾಗುತ್ತಿದ್ದಾರೆ. ತುರ್ತು ಚಿಕಿತ್ಸೆ ಪಡೆಯಬೇಕಾದರೆ ರಾತ್ರಿ ವೇಳೆ ಮ.ಬೆಟ್ಟಕ್ಕೆ ಡೋಲಿ ಕಟ್ಟಿಕೊಂಡು ರೋಗಿಯನ್ನು ಕರೆದೊಯ್ಯಬೇಕಿದೆ. ವಿದ್ಯುತ್ ಸೌಕರ್ಯ ಕಲ್ಪಿಸದ ಪರಿಣಾಮ ರಾತ್ರಿಯನ್ನು ಕೊಳ್ಳಿ ಬೆಳಕಿನಲ್ಲಿ ಕಳೆಯಬೇಕಿದೆ. ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಇಂದಿಗೂ ತೋಡು ಬಾವಿಯ ನೀರನ್ನೇ ಕುಡಿದು ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಇಂದಿಗೂ ಸಹ ಈ ಭಾಗದ ಜನರ ಮೊದಲು ಪ್ರಮುಖ ಬೇಡಿಕೆ ಎಂದರೆ ರಸ್ತೆ, ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಬೇಕು ಎನ್ನುವುದಾಗಿದೆ. ಕಳೆದ 2 ತಿಂಗಳ ಹಿಂದೆ ಸರ್ಕಾರ ಚಾರಣ ನಿರ್ಬಂಧಿಸಿದ್ದರಿಂದ ಮ.ಬೆಟ್ಟದಿಂದ ನಾಗಮಲೆಗೆ ಭಕ್ತರನ್ನು ಕರೆದೊಯ್ಯುತ್ತಿದ್ದ ಜೀಪ್ ಸಂಚಾರವನ್ನು ಸ್ಥಗಿತಗೊಳಿಸಿತು. ಪ್ರವಾಸಿಗರನ್ನೇ ನಂಬಿ ಜೀವನ ನಡೆಸುತ್ತಿದ್ದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವು. ಜೀವನ ನಿರ್ವಹಣೆ ಕಷ್ಟವಾಯಿತು. ಹೀಗಾಗಿ ಈ ಬಗ್ಗೆಯೂ ಅಧಿಕಾರಿಗಳು ಗಮನಹರಿಸಬೇಕೆಂಬ ಜನರು ನಿರೀಕ್ಷೆಯಲ್ಲಿ ಜನರಿದ್ದಾರೆ.

ಗಮನ ಸೆಳೆದ ವರದಿಗಳು:
‘ಕುಗ್ರಾಮ ಬವಣೆ’ ಸರಣಿಯಲ್ಲಿ ಗಮನ ಸೆಳೆಯುವ ಹಲವು ವರದಿಗಳು ಪ್ರಕಟಗೊಂಡವು. ಸಹಜ ಸ್ಥಿತಿಯತ್ತ ಮಕ್ಕಳ ಮನಸ್ಸು ಶೀರ್ಷಿಕೆಯಡಿ ಪ್ರಕಟಗೊಂಡ ವರದಿ ಪರಿಣಾಮ ಬೀರಿತು. ಇಂಡಿಗನತ್ತ ಶಾಲೆಗೆ ಮಕ್ಕಳನ್ನು ಕಳುಹಿಸುವುದಿಲ್ಲ ಎಂದಿದ್ದ ಮೆಂದಾರೆ ಪಾಲಕರನ್ನು ಶಿಕ್ಷಕರು ಭೇಟಿ ಮಾಡಿ ಮನವೊಲಿಸಿದರು. ‘ಜೈಲಿಗೆ ಹೋದವರಿಗೆ ಪೂಜೆ ಭಾಗ್ಯವಿಲ್ಲ’ ವರದಿ ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿತು. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟರೆ ಸಾಕು ಲೌಡ್ ಸ್ಪೀಕರ್‌ನಲ್ಲಿ ಗ್ರಾಮಸ್ಥರ ಮನದಾಳದ ದನಿ ಹೊರಹೊಮ್ಮಿತು. ಮೆಂದಾರೆ ಗ್ರಾಮಸ್ಥರು ತಮ್ಮನ್ನು ಸ್ಥಳಾಂತರ ಮಾಡಬೇಕೆಂಬ ಒತ್ತಾಯಕ್ಕೆ ಜಿಲ್ಲಾಡಳಿತ ಸ್ಪಂದಿಸಿದ್ದಕ್ಕೆ ‘ಗಿರಿಜನ ಸ್ಥಳಾಂತರಕ್ಕೆ 27ರಿಂದ ಸಮೀಕ್ಷೆ’ ವರದಿ ಸಾಕ್ಷಿಯಾಯಿತು. ಈ ರೀತಿ ಎಲ್ಲ ವರದಿಗಳೂ ಓದುಗರ ಮೆಚ್ಚುಗೆ, ಗ್ರಾಮಸ್ಥರಿಗೆ ನ್ಯಾಯ ಒದಗಿಸಿಕೊಡುವ ಕಡೆಗೆ ಹೆಜ್ಜೆ ಇಟ್ಟವು.

ಗ್ರಾಮದಲ್ಲಿ ನಡೆದ ಘಟನೆಯಿಂದ ಜನರು ಬೇಸತ್ತಿದ್ದಾರೆ. ಹಾಗಾಗಿ ಸರ್ಕಾರ ಇನ್ನಾದರೂ ಇತ್ತ ಗಮನಹರಿಸಿ ಸಮರ್ಪಕ ರಸ್ತೆ, ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಲು ಮುಂದಾಗಬೇಕು. ಮೂಲಸೌಕರ್ಯ ಒದಗಿಸಿಕೊಡುವವರೆಗೂ ಪತ್ರಿಕೆ ನಮ್ಮ ಒತ್ತಾಯವನ್ನು ಬೆಂಬಲಿಸಬೇಕು.ವೀರಣ್ಣ, ಇಂಡಿಗನತ್ತ ಗ್ರಾಮ ಗ್ರಾಮದಲ್ಲಿ ಅಗತ್ಯ ಮೂಲ ಸೌಕರ್ಯವಿಲ್ಲದ ಪರಿಣಾಮ ನಾವು ಗ್ರಾಮವನ್ನು ತೊರೆದು ಪಾಲಾರ್‌ನಲ್ಲಿ ವಾಸಿಸಲು ನಿರ್ಧರಿಸಿದ್ದು, ಜಿಲ್ಲಾಧಿಕಾರಿ ಅವರು ನೀಡಿದ್ದ ಭರವಸೆಯಂತೆ ಇದೀಗ ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ಸಮೀಕ್ಷೆ ನಡೆಸಿದ್ದಾರೆ. ಈ ಕಾರ್ಯ ಪೂರ್ಣಗೊಳಿಸಿ ನಮಗೆ ಪುನರ್ವಸತಿ ಕಲ್ಪಿಸಬೇಕು. ನಮ್ಮ ಸಮಸ್ಯೆಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿದ ವಿಜಯವಾಣಿಗೆ ಧನ್ಯವಾದ ಹೇಳುತ್ತೇವೆ.ಪಡಗಲ, ಮೆಂದಾರೆ ಗ್ರಾಮ