ಹನೂರು: ತಾಲೂಕಿನ ಮೂರು ಪ್ರತ್ಯೇಕ ಪ್ರಕರಣದಲ್ಲಿ ಸೋಮವಾರ ರಾತ್ರಿ 2 ಹಸು ಹಾಗೂ 5 ಮೇಕೆಗಳು ಕಳ್ಳತನವಾಗಿದ್ದು, ಈ ಬಗ್ಗೆ ರಾಮಾಪುರ ಹಾಗೂ ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದಲ್ಲಿ ಉಡುತೊರೆ ಜಲಾಶಯಕ್ಕೆ ತೆರಳುವ ಮಾರ್ಗದಲ್ಲಿ ಜಮೀನನ್ನು ಹೊಂದಿರುವ ಕೃಷ್ಣಪ್ಪ ಎಂಬುವರು ಹಸುವನ್ನು ಕಟ್ಟಿಹಾಕಿದ್ದರು. ಹಾಗೆಯೇ ಮಾದೇವ ಎಂಬುವರು ಜಮೀನಿನಲ್ಲಿ ಕಟ್ಟಿಹಾಕಲಾಗಿದ್ದ 5 ಮೇಕೆಗಳು ರಾತ್ರಿ ಕಳ್ಳತನವಾಗಿದೆ. ಇನ್ನು ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಣಗಳ್ಳಿ ಗ್ರಾಮದ ಮಲ್ಲಮ್ಮ ಎಂಬುವರು ತೋಟದ ಮನೆಯ ಮುಂಭಾಗ ಕಟ್ಟಿಹಾಕಲಾಗಿದ್ದ ಇಲಾತಿ ಹಸು ಕಳ್ಳತನವಾಗಿದೆ. ಈ ಕುರಿತು ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.