ಜಿಲ್ಲೆ

ಬದಲಾವಣೆಗಳಿಗೆ ಸಾಕ್ಷಿ ಇಂಡಿಗನತ್ತ

ಹನೂರು: ರಾಜ್ಯದ ಗಮನ ಸೆಳೆದ ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಇಂಡಿಗನತ್ತ ಮತಗಟ್ಟೆ ಧ್ವಂಸ ಘಟನೆ ನಡೆದು ನೆನ್ನೆಗೆ ಒಂದು ತಿಂಗಳು. ಈ ನಡುವೆ ಮೆಂದಾರೆ ಹಾಗೂ ಇಂಡಿಗನತ್ತ ಗ್ರಾಮದ ಜನರು ಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ಜಿಲ್ಲಾಡಳಿತ ಗ್ರಾಮದಲ್ಲಿ ಬದಲಾವಣೆ ತರಲು ಶ್ರಮಿಸಿದೆ. ಆದರೆ ಘಟನೆ ಮಾತ್ರ ಜನರ ಮನಸ್ಸಿನಲ್ಲಿ ಇನ್ನು ಮಾಸಿಲ್ಲ.

ಮೂಲ ಸೌಕರ್ಯ ಒದಗಿಸದ ಹಿನ್ನೆಲೆಯಲ್ಲಿ ಏ.26ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಇಂಡಿಗನತ್ತ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿದ್ದರು. ಆದರೆ ಈ ವೇಳೆ ಸಮೀಪದ ಮೆಂದಾರೆ ಗಿರಿಜನರು ಗ್ರಾಮದ ಮತಗಟ್ಟೆ ಆಗಮಿಸಿದ್ದು, 14 ಜನರು ಮತ ಚಲಾಯಿಸಿದ್ದರು. ಇದರಿಂದ ರೊಚಿಗೆದ್ದ ಇಂಡಿಗನತ್ತ ಗ್ರಾಮಸ್ಥರು ಮತಗಟ್ಟೆಯನ್ನು ಧ್ವಂಸಗೊಳಿಸಿದ್ದರು. ಈ ವೇಳೆ ಮೆಂದಾರೆ ಗ್ರಾಮದ ಗಿರಿಜನರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಹಲ್ಲೆಗೊಳಗಾದರು. ಈ ಸಂಬಂಧ ಮ.ಬೆಟ್ಟ ಪೊಲೀಸ್ ಠಾಣೆಯಲ್ಲಿ 3 ಪ್ರತ್ಯೇಕ ದೂರು ದಾಖಲಾಗಿತ್ತು. ಬಳಿಕ ಗ್ರಾಮದಲ್ಲಿ ಹಲವು ಬದಲಾವಣೆಗಳು ಕಂಡವು.

ಏನೆನೆಲ್ಲ ಆಯ್ತು:
ಘಟನೆಯ ಬಳಿಕ ದೂರು ದಾಖಲಾದ ಹಿನ್ನೆಲೆ 20 ಮಹಿಳೆಯರು ಹಾಗೂ 25 ಪುರುಷರನ್ನು ಪೊಲೀಸರು ಬಂಧಿಸಿದರು. ಬಂಧನದ ಭೀತಿಯಿಂದ ಇಂಡಿಗನತ್ತ ಗ್ರಾಮದ ಬಹುತೇಕ ಜನರು ಊರನ್ನು ತೊರೆದು ಅರಣ್ಯ ಪ್ರದೇಶ ಹಾಗೂ ಸಂಬಂಧಿಕರ ಮನೆಯಲ್ಲಿ ವಾಸವಿದ್ದರು. ಮೆಂದಾರೆ ಗಿರಿಜನರು ಹಲ್ಲೆಗೊಳಗಾಗಿ ನೋವನ್ನು ಅನುಭವಿಸಬೇಕಾಯಿತು. ಕೂಲಿಯಲ್ಲದೆ ಮನೆಯಲ್ಲೇ ಕೂರುವಂತಹ ಪರಿಸ್ಥಿತಿ ಎದುರಿಸಬೇಕಾಯಿತು. ಇತ್ತ ಜೈಲು ಸೇರಿದ್ದ ಕುಟುಂಬಗಳಲ್ಲಿ ನೋಡಿಕೊಳ್ಳವವರಿಲ್ಲದೆ ವೃದ್ಧರು ಹಾಗೂ ಮಕ್ಕಳಲ್ಲಿ ಒಂಟಿತನ ಕಾಡಿತು. ಊಟಕ್ಕಾಗಿ ತೊಂದರೆ ಅನುಭವಿಸಬೇಕಾಯಿತು. ಅಂಗನವಾಡಿ ಕಾರ್ಯಕರ್ತೆ ನ್ಯಾಯಾಂಗ ಬಂಧನದಲ್ಲಿ ಇದ್ದ ಕಾರಣ ಮಕ್ಕಳು, ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರ ಸ್ಥಗಿತಗೊಂಡಿತ್ತು. ಇನ್ನು ಪಾಲನೆ ಮಾಡುವವರಿಲ್ಲದೆ ಗ್ರಾಮದಲ್ಲಿ 2 ಎಮ್ಮೆ ಹಾಗೂ ಒಂದು ಹಸು ಮೃತಪಟ್ಟಿತ್ತು. ಮೇವಿನ ಸಮಸ್ಯೆ ತಲೆದೂರಿತ್ತು. ಗ್ರಾಮದ ಜನರಲ್ಲಿ ಭಯದ ವಾತಾವರವಣದ ಜತೆಗೆ ಚಿಂತೆ ಮನೆ ಮಾಡಿ, ಮೌನ ಆವರಿಸಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸ ಬೇಕಾಯಿತು. ಇದು ಘಟನೆಯ ಬಳಿಕ 2 ಗ್ರಾಮದಲ್ಲಿ ನಡೆದ ಪ್ರಮುಖ ವಿಚಾರಗಳು.

ಬದಲಾದ ಬೆಳವಣಿಗೆ:
ಘಟನೆಯ ಬಳಿಕ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಧಿಕಾರಿಗಳು ಹಾಗೂ ಪೊಲೀಸರು ಮತಗಟ್ಟೆಗೆ ತೆರಳಿ ಮಹಜರ್ ನಡೆಸಿ ವರದಿ ಸಂಗ್ರಹಿಸಿದರು. ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ತಂಡ ಮೆಂದಾರೆ ಗ್ರಾಮಕ್ಕೆ ಭೇಟಿ ನೀಡಿ, ಸಮಾಲೋಚನೆ ನಡೆಸಿ ಹಲ್ಲೆಗೊಳಗಾಗಿ ಜನರಿಗೆ ಅಗತ್ಯ ಚಿಕಿತ್ಸೆ ಕೊಡಿಸಿದರು. ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳೀಯ ಮುಖಂಡರ ಸಹಕಾರ ಪಡೆದು ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದ್ದರು. ಈ ವೇಳೆ ಘಟನೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡುವವರನ್ನು ಪೊಲೀಸರಿಗೆ ಒಪ್ಪಿಸಿ ಇನ್ನುಳಿದವರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ ಎಂದು ಅಭಯ ನೀಡಿದ್ದರು. ಗ್ರಾಮಗಳಿಗೆ ಸೋಲಿಗರ ಸಂಘಟನೆ, ರೈತ ಸಂಘಟನೆ ಹಾಗೂ ಬೇಡಗಂಪಣ ಮುಖಂಡರು ಭೇಟಿ ನೀಡಿ ಜನರಿಗೆ ಧೈರ್ಯ ಹೇಳಿದ್ದರು. ಬಳಿಕ ಇಂಡಿಗನತ್ತ ಗ್ರಾಮದಲ್ಲಿ ಜನರು ಊಟದ ಸಮಸ್ಯೆ ಎದುರಿಸುತ್ತಿದ್ದನ್ನು ಮನಗಂಡ ಬೇಡಗಂಪಣ ಮುಖಂಡ ಕೆ.ವಿ.ಮಾದೇಶ್ ಹಾಗೂ ನೇತೃತ್ವದ ತಂಡ ಇಂಡಿಗನತ್ತ ಗ್ರಾಮದಲ್ಲಿ ಊಟದ ವ್ಯವಸ್ಥೆ ಕಲ್ಪಿಸಿತ್ತು. ಇನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪಡಿತರ ವಿತರಿಸಿತ್ತು. ಇನ್ನು ಮಹಿಳಾ ಮತ್ತು ಕುಟುಂಬ ಕಲ್ಯಾಣಾಧಿಕಾರಿ ನಂಜಮಣಿ ಅವರು ಗ್ರಾಮಕ್ಕೆ ಭೇಟಿ ನೀಡಿ, ಮನೆಮನೆಗೆ ತೆರಳಿ ಮಕ್ಕಳು, ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರ ಪದಾರ್ಥ ವಿತರಿಸಿದ್ದರು. ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭಿಸಲಾಯಿತು. ಜಾನುವಾರುಗಳಿಗೆ ಮೇವು ಪೂರೈಸಲಾಯಿತು. ಭಾನುವಾರ ತಾಲೂಕು ವೀರಶೈವ-ಲಿಂಗಾಯತ ಮಹಾಸಭಾ ವತಿಯಿಂದಲೂ ಇಂಡಿಗನತ್ತ ಗ್ರಾಮದ ಜನರಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.

ಮರು ಮತದಾನ:
ಮೆಂದಾರೆ ಗ್ರಾಮದ 14 ಜನರು ಮತ ಚಲಾಯಿಸಿದ್ದರೂ ಮತಯಂತ್ರ ಧ್ವಂಸಗೊಂಡ ಹಿನ್ನೆಲೆ ಚುನಾವಣೆ ಆಯೋಗ ಮತದಾನವನ್ನು ತಿರಸ್ಕೃತಗೊಳಿಸಿತ್ತು. ಏ.29 ರಂದು ಮರು ಮತದಾನ ನಿಗದಿಪಡಿಸಲಾಗಿತು. ಈ ಬಗ್ಗೆ ಟಾಂಟಾಂ ಮೂಲಕ ಜನರಲ್ಲಿ ಜಾಗೃತಿ ಮೂಢಿಸಲಾಗಿತು. ಏ.29 ರಂದು ನಡೆದ ಮರು ಮತದಾನದಲ್ಲಿ ಭಯದ ನಡುವೆಯೂ ಮೆಂದಾರೆ ಗ್ರಾಮದ 58 ಹಾಗೂ ಇಂಡಿಗನತ್ತದ 13 ಜನರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಮೂಲಕ ಅಧಿಕಾರಿಗಳು ನಿಟ್ಟುಸಿರು ಬಿಟ್ಟರು. ಬಳಿಕ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರು ಮೇ 13ರಂದು 2 ಗ್ರಾಮಗಳಿಗೂ ಭೇಟಿ ನೀಡಿ, ಮನೆಮನೆಗೂ ತೆರಳಿ ಆರೋಗ್ಯ ವಿಚಾರಿಸಿ ಗ್ರಾಮಸ್ಥರಿಗೆ ಆತ್ಮಸ್ಥೈರ್ಯ ತುಂಬಿದ್ದರು.

ಬಿಡುಗಡೆಯಾದ 46 ಜನರು:
ಪ್ರಕರಣದ ಹಿನ್ನೆಲೆ ಮೈಸೂರಿನ ಕಾರಗೃದಲ್ಲಿದ್ದ 20 ಮಹಿಳೆಯರು ಹಾಗೂ ಚಾ.ನರದಲ್ಲಿದ್ದ 26 ಪುರುಷರನ್ನು ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಜನಧ್ವನಿ ಬಿ.ವೆಂಕಟೇಶ್ ಅವರು ಬೇಡಗಂಪಣ ಮುಖಂಡರ ಸಹಕಾರ ಪಡೆದು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು. ಬಳಿಕ ಮಾಜಿ ಸಚಿವ ಎನ್.ಮಹೇಶ್ ಹಾಗೂ ವೆಂಕಟೇಶ್ ಗ್ರಾಮಕ್ಕೆ ಭೇಟಿ ನೀಡಿ, ಜನರಿಗೆ ಧೈರ್ಯ ಹೇಳಿದರು.

ಈಗ ಜನ ಏನಾಂತಾರೆ? :
ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮದಲ್ಲಿ ಜನ ಜೀವನ ಮೇಲ್ನೋಟಕ್ಕೆ ಸಹಜ ಸ್ಥತಿಯತ್ತ ಮರಳುತ್ತಿದ್ದು, ಇಂಡಿಗನತ್ತ ಗ್ರಾಮದ ಜನರು ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ ನಡೆಸುತ್ತಿರುವ ಕೆರೆ ಅಭಿವೃದ್ಧಿ ಕೆಲಸಕ್ಕೆ ತೆರಳುತ್ತಿದ್ದಾರೆ. ಆದರೆ 4 ದಿನದ ಹಿಂದೆ ಇಂಡಿಗನತ್ತ ಗ್ರಾಮದಲ್ಲಿ ವೀರಣ್ಣ ಎಂಬುವರನ್ನು ಘಟನೆಯ ಹಿನ್ನ್ನೆಲೆ ಪೊಲೀಸರು ಬಂಧಿಸಿದ್ದು, ಜನರಲ್ಲಿ ಮತ್ತೆ ಭಯದ ವಾತವರಣ ಮನೆ ಮಾಡಿದೆ. ಅಲ್ಲದೆ ಮೂಲಸೌಕರ್ಯ ಒದಗಿಸುವಂತೆ ಇಂದಿಗೂ ಜನರಿಂದ ಒತ್ತಾಯ ಕೇಳಿ ಬರುತ್ತಲೇ ಇದೆ. ಇತ್ತ ಮೆಂದಾರೆ ಗ್ರಾಮದಲ್ಲಿ ಗಿರಿಜನರು ತಮ್ಮನ್ನು ಪಾಲಾರ್‌ಗೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಮೇ 27 ರಿಂದ 3 ದಿನಗಳ ಕಾಲ 6 ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಸಮೀಕ್ಷೆ ನಡೆಯಲಿದೆ. ಒಟ್ಟಾರೆ ಇಂಡಿಗನತ್ತ ಮತಗಟ್ಟೆ ಧ್ವಂಸ ಪ್ರಕರಣ ಮಾತ್ರ 2 ಎರಡು ಗ್ರಾಮದಲ್ಲೂ ಸಾಕಷ್ಟು ಬದಲಾವಣೆಗೆ ಸಾಕ್ಷಿಯಾಗಿದೆ.