ಜಿಲ್ಲೆ

ಧರಣಿ ಕೈ ಬಿಟ್ಟ ಭಾರತೀಯ ಕಿಸಾನ್ ಸಂಘ

ಕಿರಣ್ ಮಾದರಹಳ್ಳಿ

ಹನೂರು: ಜಾನುವಾರುಗಳಿಗೆ ಮೇವು ಒದಗಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಪಟ್ಟಣದ ತಹಸೀಲ್ದಾರ್ ಕಚೇರಿಯ ಪ್ರವೇಶ ದ್ವಾರದಲ್ಲಿ ಕೈಗೊಂಡಿದ್ದ ಧರಣಿ ನಿರತ ಸ್ಥಳಕ್ಕೆ ಶುಕ್ರವಾರ ರಾತ್ರಿ ಎಸಿ ಶಿವಮೂರ್ತಿ ಭೇಟಿ ನೀಡಿ ಅಗತ್ಯ ಭರವಸೆ ನೀಡಿದ ಬಳಿಕ ಪ್ರತಿಭಟನಕಾರರು ಪ್ರತಿಭಟನೆಯನ್ನು ಕೈ ಬಿಟ್ಟರು.

ಬರಗಾಲದ ಹಿನ್ನೆಲೆಯಲ್ಲಿ ತಾಲೂಕಿನ ಕೆಲವೆಡೆ ತಾತ್ಕ್ಕಾಲಿಕ ಗೋಶಾಲೆಯನ್ನು ತೆರೆದು ಜಾನುವಾರುಗಳಿಗೆ ಮೇವನ್ನು ಒದಗಿಸಲಾಗುತ್ತಿದೆ. ಆದರೆ 10 ಸಾವಿರಕ್ಕೂ ಹೆಚ್ಚು ದೇಸಿ ತಳಿಯ ಹಸುಗಳನ್ನು ಹೊಂದಿರುವ ರಾಮಾಪುರ, ದಿನ್ನಳ್ಳಿ, ಜಲ್ಲಿಪಾಳ್ಯ, ಹುತ್ತೂರು ಗ್ರಾಪಂ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಗೋಶಾಲೆ ತೆರೆದಿರಲಿಲ್ಲ. ಇದರಿಂದ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿತ್ತು. ಮೇವನ್ನು ಒದಗಿಸುವಂತೆ ಕಳೆದ 15 ದಿನದ ಹಿಂದೆಯೇ ತಹಸೀಲ್ದಾರ್ ಹಾಗೂ ಅಪರ ಜಿಲ್ಲಾಧಿಕಾರಿ ಅವರಿಗೂ ಮನವಿ ಸಲ್ಲಿಸಲಾಗಿದ್ದು, ಅಗತ್ಯ ಭರವಸೆ ನೀಡಿದ್ದರು. ಆದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸದ ಹಿನ್ನೆಲೆಯಲ್ಲಿ ಗುರುವಾರ ಕಿಸಾನ್ ಸಂಘದ ಪದಾಧಿಕಾರಿಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಗ್ರೇಡ್-2 ತಹಸೀಲ್ದಾರ್ ಧನಂಜಯ ಅವರನ್ನು ತರಾಟೆಗೆ ತೆಗೆದುಕೊಂಡು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವಂತೆ ಆಹೋ ರಾತ್ರಿ ಧರಣಿಯನ್ನು ಮುಂದುವರಿಸಿದ್ದರು.

ಶುಕ್ರವಾರ ರಾತ್ರಿ 8ರಲ್ಲಿ ಉಪ ವಿಭಾಗಾಧಿಕಾರಿ ಶಿವಮೂರ್ತಿ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತರಿಂದ ಸಮಸ್ಯೆ ಅಲಿಸಿ ಮಾತನಾಡಿ, ಗೋಶಾಲೆ ತೆರೆಯಲು ಸಾಧ್ಯವಿಲ್ಲ. ಮೇವು ಬ್ಯಾಂಕ್ ತೆರೆಯಲಾಗುವುದು ಎಂದು ತಿಳಿಸಿದರು. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಸುಮಾರು 1 ಗಂಟೆಗಳ ಕಾಲ ಈ ಸಂಬಂಧ ತೀವ್ರ ವಾಗ್ವಾದ ನಡೆಸಿದರು. ಬಳಿಕ ಸಂದಿಗ್ಧ ಪರಿಸ್ಥಿತಿಯನ್ನು ವಿವರಿಸಿದ ಅಧಿಕಾರಿಗಳು, ಗ್ರಾಮಗಳಿಗೆ ಅಗತ್ಯ ಮೇವು ಒದಗಿಸುವುದಾಗಿ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆಯನ್ನು ಕೈ ಬಿಟ್ಟರು.

ತಹಸೀಲ್ದಾರ್ ವೈ.ಕೆ ಗುರುಪ್ರಸಾದ್, ತಾಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿದ್ದರಾಜು, ಕಿಸಾನ್ ಸಂಘದಜಿಲ್ಲಾ ಕಾರ್ಯದರ್ಶಿ ಬೋಸ್ಕೋ, ಸದಸ್ಯ ಮಣಿಗಾರ್ ಪ್ರಸಾದ್, ತಾಲೂಕು ಸಂಘದ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಸದಾನಂದ, ರೈತ ಮುಖಂಡರಾದ ವಿಶ್ವೇಶ್ವರ್ ಪ್ರಸಾದ್, ನಟರಾಜು, ನಾಗೇಶ್, ಶ್ರೀನಿವಾಸ್ ಇತರರಿದ್ದರು.