ಹನೂರು: ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಚುನಾವಣಾ ವಿಚಕ್ಷಣದಳ ಇತ್ತೀಚೆಗೆ ಹನೂರು ಪೋಲಿಸ್ ಠಾಣೆಗೆ ದೂರು ನೀಡಿದೆ.
ಹನೂರು ಪಟ್ಟಣದ ವಾಸವಿ ಮಹಲ್‌ನಲ್ಲಿ ಮಾ.28ರಂದು ಕಾಂಗ್ರೆಸ್‌ನಿಂದ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಭಾಷಣ ಮಾಡುವಾಗ ಯತೀಂದ್ರ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಒಬ್ಬ ಗೂಂಡಾ, ರೌಡಿ, ಕೊಲೆ ಆರೋಪದಡಿ ಗುಜರಾತ್‌ನಲ್ಲಿ ಗಡಿಪಾರು ಆಗಿದ್ದರು. ಅಂತಹವರನ್ನು ಪಕ್ಕದಲ್ಲಿ ಇಟ್ಟುಕೊಂಡು ನರೇಂದ್ರ ಮೋದಿ ಸರ್ಕಾರ ನಡೆಸುತ್ತಿದ್ದಾರೆ ಎಂದು ವಿವಾದಾತ್ಮಕವಾಗಿ ಮಾತನಾಡಿದ್ದರು.
ಈ ಸಂಬಂಧ ಮಾ.29 ರಂದು ಚುನಾವಣಾ ವಿಚಕ್ಷಣದಳ ಪರಿಶೀಲಿಸಿ ಜಿಲ್ಲಾಧಿಕಾರಿ ಅವರಿಗೆ ಸಹಾಯಕ ಚುನಾವಣಾಧಿಕಾರಿ ಮೂಲಕ ವರದಿ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಯೂ ಚುನಾವಣಾ ಮಾರ್ಗಸೂಚಿ ಪ್ರಕಾರ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ತುರ್ತು ಕ್ರಮಕೈಗೊಂಡು ವರದಿ ಸಲ್ಲಿಸುವಂತೆ ಸಹಾಯಕ ಚುನಾವಣಾಧಿಕಾರಿಗೆ ಸೂಚಿಸಿದ್ದರು. ಈ ದೆಸೆಯಲ್ಲಿ ಚುನಾವಣಾ ವಿಚಕ್ಷಣದಳದ ಸದಸ್ಯ ಗುಂಡೂರಾವ್ ಎಂಬುವವರು ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.