ಹನೂರು: ತಾಲೂಕಿನ ಮಹದೇಶ್ವರಬೆಟ್ಟ - ಪಾಲಾರ್ ನಡುವಿನ ಜಮೀನೊಂದರಲ್ಲಿ ಮಂಗಳವಾರ ವಿಷ ಸೇವಿಸಿದ್ದ ಅಪರಿಚಿತ ವೃದ್ಧ ಮೃತಪಟ್ಟಿದ್ದಾರೆ.
ಬೆಳಗ್ಗೆ 9ರ ವೇಳೆಯಲ್ಲಿ ಪಾಲಾರ್ ರಸ್ತೆ ಬದಿಯಲ್ಲಿನ ರವಿ ಅವರ ಜಮೀನಿನಲ್ಲಿ 80 ವರ್ಷದ ವೃದ್ಧ ವಿಷ ಸೇವಿಸಿ ನರಳಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ತಿಳಿಸಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಮ.ಬೆಟ್ಟ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ತುರ್ತು ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ.
ಮೃತದೇಹವನ್ನು ಚಾ.ನಗರ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತರು 172 ಸೆಂಮೀ ಎತ್ತರ, ಬಿಳಿ ತಲೆಕೂದಲು, ಗೋಧಿ ಮೈಬಣ್ಣ, ಕೋಲುಮುಖ, ಸಣ್ಣ ಮೈಕಟ್ಟು ಹೊಂದಿದ್ದು, ಬಿಳಿ ಬಣ್ಣದ ಷರ್ಟ್ ಹಾಗೂ ಬಿಳಿ ಪಂಚೆ ಧರಿಸಿದ್ದಾರೆ. ಮೃತನ ಬಗ್ಗೆ ಮಾಹಿತಿ ತಿಳಿದ್ದಲ್ಲಿ ಮ.ಬೆಟ್ಟ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.