oppo_2 
ಜಿಲ್ಲೆ

ಗುಂಡಿಮಯ ರಾಮಾಪುರ-ನಾಲ್‌ರೋಡ್ ರಸ್ತೆ

ಕಿರಣ್ ಮಾದರಹಳ್ಳಿ

ಹನೂರು: ತಾಲೂಕಿನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ಹೆದ್ದಾರಿ ರಾಮಾಪುರದಿಂದ ನಾಲ್‌ರೋಡ್‌ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ವಿಳಂಬವಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ.

ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ 7 ತಿಂಗಳಾದರೂ ಇನ್ನೂ ಆರಂಭವಾಗದ ಕಾರಣ ರಸ್ತೆಯಲ್ಲಿ ವಾಹನ ಸವಾರರು ಸಂಚರಿಸಲು ಕಷ್ಟಪಡುವಂತಾಗಿದೆ. ರಾಮಾಪುರದಿಂದ 9 ಕಿ.ಮೀ. ಅಂತರವನ್ನು ಹೊಂದಿರುವ ನಾಲ್‌ರೋಡ್ ಗ್ರಾಮವು ತಾಲೂಕಿನ ಗಡಿಯಾಗಿದ್ದು ಚೆಕ್‌ಪೋಸ್ಟ್ ಕೇಂದ್ರವಾಗಿದೆ. ಈ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ಹೆದ್ದಾರಿಯಾಗಿದ್ದು, ಹನೂರಿನ ಮೂಲಕ ಅಜ್ಜೀಪುರ, ಮಂಚಾಪುರ, ರಾಮಾಪುರ ಮಾರ್ಗವಾಗಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ಈ ರಸ್ತೆಯನ್ನು ಕೆಲವು ಕಡೆಗಳಲ್ಲಿ 6 ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿತ್ತು. ಬಳಿಕ 2022ರಲ್ಲಿ ಅಲ್ಲಲ್ಲಿ ನಿರ್ಮಾಣವಾಗಿದ್ದ ಗುಂಡಿಗಳಿಗೆ ಪಿಡಬ್ಲುೃಡಿ ಇಲಾಖೆ ತೇಪೆ ಹಾಕಲಾಗಿತ್ತು. ಆದರೆ, ಕಳೆದ ಒಂದೂವರೆ ವರ್ಷದ ಹಿಂದೆ ಚಾಮರಾಜನಗರದ ಮೂಲಕ ತಮಿಳುನಾಡಿಗೆ ತೆರಳುವ ದಿಂಬಂ ಘಾಟ್ ಮಾರ್ಗದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಅಧಿಕ ಭಾರದ ಸರಕು ಸಾಗಣೆ ವಾಹನಗಳು ಅದರಲ್ಲೂ ಮುಖ್ಯವಾಗಿ 10ಕ್ಕಿಂತ ಹೆಚ್ಚು ಚಕ್ರದ ಲಾರಿಗಳು ನಾಲ್‌ರೋಡ್ ಮೂಲಕ ತಮಿಳುನಾಡಿಗೆ ಹೆಚ್ಚು ಸಂಚರಿಸಲು ಆರಂಭಿಸಿದವು. ಇದರ ಪರಿಣಾಮ ಮಾರ್ಗದ ಬಹುತೇಕ ಕಡೆಗಳಲ್ಲಿ ಗುಂಡಿ ನಿರ್ಮಾಣವಾಗಿ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ರಸ್ತೆ ನಿರ್ಮಿಸುವಂತೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ಕೇಳಿ ಬಂದಿತ್ತು. ಅಲ್ಲದೆ ರೈತ ಹಾಗೂ ಪ್ರಗತಿಪರ ಸಂಘಟೆನಗಳಿಂದ ಪ್ರತಿಭಟನೆಗಳು ನಡೆದಿವೆ. ಈ ಮಧ್ಯೆ ಲಾರಿ ಮಾಲೀಕರು ಬೇಸತ್ತು ಬಾಯ್ತೆರೆದಿದ್ದ ಗುಂಡಿಗಳಿಗೆ ಮಣ್ಣು ಹಾಕಿಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

25 ಕೋಟಿ ರೂ.ವೆಚ್ಚ:
ಸಮಸ್ಯೆ ಮನಗಂಡ ಶಾಸಕ ಎಂ.ಆರ್.ಮಂಜುನಾಥ್ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಿ ಪಿಡಬ್ಲುೃಡಿ ಇಲಾಖೆಯಿಂದ 25 ಕೋಟಿ ರೂ. ವೆಚ್ಚದ ಕಾಮಗಾರಿಗೆ ಮಾ.11ರಂದು ಭೂಮಿಪೂಜೆ ನೆರವೇರಿಸಿದ್ದರು. 7 ತಿಂಗಳಾದರೂ ಈವರೆಗೂ ಕಾಮಗಾರಿ ಆರಂಭವಾಗದ ಪರಿಣಾಮ ವಾಹನ ಸವಾರರು ಕಷ್ಟ ಅನುಭವಿಸುತ್ತಿರುವುದು ನಿಜಕ್ಕೂ ವಿಪರ್ಯಾಸ. ಮಳೆಗಾಲದಲ್ಲಂತೂ ಸವಾರರ ಕಷ್ಟ ಹೇಳತೀರದು.

ರಸ್ತೆಯ ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು ಜಲ್ಲಿಕಲ್ಲುಗಳು ರಸ್ತೆಯ ಇಕ್ಕೆಲಗಳಲ್ಲಿ ಹರಡಿಕೊಂಡಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅದರಲ್ಲೂ ಬೈಕ್ ಸವಾರರು ಸಂಚರಿಸಲು ಹರಸಾಹಸಪಡುವಂತಾಗಿದೆ. ಕೆಲ ವೇಳೆ ಜಲ್ಲಿಕಲ್ಲು ಹಾಗೂ ಗುಂಡಿಗಳನ್ನು ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇದೆ. ಅಲ್ಲದೆ ನಿಯಂತ್ರಣ ತಪ್ಪಿ ಸರಕು ತುಂಬಿದ ಲಾರಿಗಳು ಮಗುಚಿ ಬಿದ್ದಿರುವ ಘಟನೆಗಳು ನಡೆದಿವೆ.

ಕೆಲವು ಕಡೆಗಳಲ್ಲಿ ಡಾಂಬರು ಕಿತ್ತು ಬಂದಿದೆ. ಇದರಿಂದ ವಾಹನದ ಹಿಂಭಾಗ ತೆರಳುವವರಿಗೆ ಧೂಳಿನ ಪ್ರೋಕ್ಷಣೆ ತಪ್ಪಿದ್ದಲ್ಲ. ಕೆಲವು ಕಡೆಗಳಲ್ಲಿ ವಾಹನಗಳು ರಸ್ತೆ ಬಿಟ್ಟು ಬದಿಯಲ್ಲಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದ್ದು ತೊಂದರೆ ಅನುಭವಿಸಬೇಕಾಗಿದೆ. ಆದ್ದರಿಂದ ಸ್ಥಳೀಯ ಶಾಸಕರು ಹಾಗೂ ಪಿಡಬ್ಲುೃಡಿ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಕಾಮಗಾರಿ ಆರಂಭಿಸಿ ಶೀಘ್ರ ಪೂರ್ಣಗೊಳಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಮಾಪುರ - ನಾಲ್‌ರೋಡ್ ಮಾರ್ಗದ ರಸ್ತೆಯು ಸಂಪೂರ್ಣ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಶಾಸಕರು ಭೂಮಿಪೂಜೆ ನೆರವೇರಿಸಿ 7 ತಿಂಗಳು ಕಳೆದಿದೆ. ಆದರೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಇದರಿಂದ ಹದಗೆಟ್ಟ ರಸ್ತೆಯಲ್ಲಿ ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಸಂಚರಿಸಲು ನರಕಯಾತನೆ ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಮುತುವರ್ಜಿ ವಹಿಸಿ ಕಾಮಗಾರಿ ಶುರು ಮಾಡಿ ಉತ್ತಮ ರಸ್ತೆ ನಿರ್ಮಿಸುವುದರ ಮೂಲಕ ಅನುಕೂಲ ಕಲ್ಪಿಸಬೇಕು.ಕುಮಾರ್, ರಾಮಾಪುರ ನಿವಾಸಿ
ಈ ಮಾರ್ಗದ ರಸ್ತೆಯು ಸಂಪೂರ್ಣ ಹದಗೆಟ್ಟಿರುವ ಕಾರಣ ಈ ಭಾಗದ ಜನರು ಸಂಚರಿಸಲು ಪಡುಬಾರದ ಕಷ್ಟ ಪಡುತ್ತಿದ್ದಾರೆ. ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದೆ. ಆದರೆ ಕಾಮಗಾರಿ ಆರಂಭವಾಗಿಲ್ಲ. ರಸ್ತೆಯ ದುಸ್ಥಿತಿಯ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆದರೆ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ರಸ್ತೆ ಅಭಿವೃದ್ಧಿಪಡಿಸಿ ಜನರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು.ಪಳನಿಸ್ವಾಮಿ, ನೆಲ್ಲೂರು ಗ್ರಾಮ
ರಾಮಾಪುರ - ನಾಲ್‌ರೋಡ್ ಮಾರ್ಗದ ರಸ್ತೆ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಆಗಿದೆ. ಆದರೆ, ಆಯುಧಪೂಜೆ ಹಬ್ಬ ಹಿನ್ನೆಲೆ ಕಾರ್ಮಿಕರು ಕೆಲಸಕ್ಕೆ ಲಭ್ಯವಾಗಿಲ್ಲ. ಆದ್ದರಿಂದ ಸದ್ಯದಲ್ಲಿಯೇ ಕಾಮಗಾರಿ ಆರಂಭಿಸಲಾಗುತ್ತದೆ. ಈ ಬಗ್ಗೆ ಅಗತ್ಯ ಕ್ರಮವಹಿಸಲಾಗಿದೆ.ಚಿನ್ನಣ್ಣ, ಎಇಇ ಪಿಡಬ್ಲುೃಡಿ ಇಲಾಖೆ, ಮ. ಬೆಟ್ಟ ಉಪ ವಿಭಾಗ