ಜಿಲ್ಲೆ

ವಿಜೃಂಭಣೆಯಿಂದ ಜರುಗಿದ ದೇವರುಗಳ ಉತ್ಸವ

ಕಿರಣ್ ಮಾದರಹಳ್ಳಿ

ಹನೂರು: ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಭಾನುವಾರ ವಿಜಯದಶಮಿ ಮುಕ್ತಾಯದ ಹಿನ್ನೆಲೆ ವಿವಿಧ ದೇವರುಗಳ ಉತ್ಸವ ಮೂರ್ತಿಯ ಮೆರವಣಿಗೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಲೊಕ್ಕನಹಳ್ಳಿ ಗ್ರಾಮ ಸಮೀಪದ ಬೇಡೆಗೆರೆ ಕಾಡಂಚಿನಲ್ಲಿರುವ ಶ್ರೀ ಹಿಂಬಿ ಮಹದೇಶ್ವರ ದೇಗುಲದಲ್ಲಿ ಶನಿವಾರ ಸಂಜೆ 4ರ ವೇಳೆಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕೊಂಡೋತ್ಸವ ನೆರವೇರಿತು. ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರು ಕೊಂಡವನ್ನು ಹಾಯುವುದರ ಮೂಲಕ ಭಕ್ತಿ ಸಮರ್ಪಿಸಿದರು. ದೇಗುಲವನ್ನು ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತಲ್ಲದೆ ಮಹದೇಶ್ವರ ಸ್ವಾಮಿಯ ಮೂರ್ತಿಯನ್ನು ವಿವಿಧ ಪುಷ್ಪದಿಂದ ಸಿಂಗರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.

ವಿಜೃಂಭಣೆಯ ಉತ್ಸವ ಮೂರ್ತಿಗಳ ಮೆರವಣಿಗೆ:
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿವಿಧ ದೇವರ ಉತ್ಸವ ಮೂರ್ತಿಗಳನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿದ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ನಡೆಸಲಾಯಿತು.
ಬೆಳಗ್ಗೆ ಕಾಡಂಚಿನಲ್ಲಿರುವ ಶ್ರೀ ಹಿಂಬಿ ಮಹದೇಶ್ವರ ದೇಗುಲದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಗ್ರಾಮಸ್ಥರು ಹಾಗೂ ಅರ್ಚಕರು ಸಂಪ್ರದಾಯದಂತೆ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯಮೇಳದೊಂದಿಗೆ ಲೊಕ್ಕನಹಳ್ಳಿ ದೊಡ್ಡಕೆರೆಯ ಮೈದಾನಕ್ಕೆ ತೆರಳಿ ಬನ್ನಿಮರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಇದೇ ವೇಳೆ ಗ್ರಾಮ ದೇವತೆಗಳಾದ ಮುತ್ತುರಾಯಸ್ವಾಮಿ, ಪೆರುಮಾಳಸ್ವಾಮಿ, ಕೋಪರ ಹುಚ್ಚಮ್ಮ, ಷಣ್ಮುಗ, ಮಾರಮ್ಮ, ಸಂಪಿಗೇಶ್ವರ, ಬಸವ, ಕಂಚಿನ ಬಸವ, ಸಿದ್ದಪ್ಪಾಜಿ ಸೇರಿದಂತೆ ಒಂಭತ್ತು ದೇವರುಗಳಿಗೆ ವಿವಿಧ ಪುಷ್ಪಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಸತ್ತಿಗೆ, ಸೂರಿಪಾನಿ ವಾದ್ಯಮೇಳದೊಂದಿಗೆ ಗ್ರಾಮದ ಮುಖ್ಯರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವ ಮೂರ್ತಿಯ ಮೆರವಣಿಗೆಯು ವಿಜೃಂಭಣೆಯಿಂದ ಜರುಗಿತು.

ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಕೆ: ಮೆರವಣಿಗೆಯಲ್ಲಿ ಗ್ರಾಮದ ಪ್ರತಿ ಕುಟುಂಬದವರು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರಲ್ಲದೆ ಮೆರವಣಿಗೆಯುದ್ದಕ್ಕೂ ಹರಕೆ ಹೊತ್ತ ಭಕ್ತರು ಈಡುಗಾಯಿಯನ್ನು ಹೊಡೆಯುವುದರ ಮೂಲಕ ದೇವರ ಕೃಪೆಗೆ ಪಾತ್ರರಾದರು. ಉತ್ಸವ ಮೂರ್ತಿಗಳಿಗೆ ಧನ, ಧಾನ್ಯವನ್ನು ಎಸೆದು ಪುನೀತರಾದರು. ಯುವಕರು ದಾರಿಯುದ್ದಕ್ಕೂ ದೇವರುಗಳ ಬಗ್ಗೆ ಜಯ ಘೋಷಗಳನ್ನು ಕೂಗುತ್ತಾ ಪಟಾಕಿ ಸಿಡಿಸಿ ವಾದ್ಯ ತಾಳಕ್ಕೆ ಕುಣಿದು ಸಂಭ್ರಮಿಸಿದರು.

ಪೂಜೆ ಸಲ್ಲಿಸಲು ಮುಗಿಬಿದ್ದ ಜನರು: ಉತ್ಸವ ಮೂರ್ತಿಗಳು ಗ್ರಾಮದ ಬಡಾವಣೆಗಳಿಗೆ ತೆರಳುತ್ತಿದ್ದಂತೆಯೇ ಮಹಿಳೆಯರು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಲು ಮುಗಿಬಿದ್ದರೆ, ದೇವರ ಉತ್ಸವ ಮೂರ್ತಿಗಳನ್ನು ಹೊತ್ತವರು ವಿರಾವೇಶದಿಂದ ಕೂಗುತ್ತಾ ಓಡುತ್ತಾ ನೆರೆದಿದ್ದವರಲ್ಲಿ ಉತ್ಸುಕತೆಯನ್ನು ಮೂಡಿಸಿದರು. ಮೆರವಣಿಗೆ ಸುಮಾರು 3 ಗಂಟೆಗಳ ಕಾಲ ನಡೆಯಿತು.
ಮೆರವಣಿಗೆಯಲ್ಲಿ ಹನೂರು ಸೇರಿದಂತೆ ಕಂಡಯ್ಯನಪಾಳ್ಯ, ದೊಡ್ಡಮಾಲಾಪುರ, ಚಿಕ್ಕಮಾಲಾಪುರ, ಮಹಾಲಿಂಗನಕಟ್ಟೆ, ಸಿರಗೋಡು, ಸುಳಿಮೇಡು, ಆಂಡಿಪಾಳ್ಯ, ಬೂದಿಪಡಗ, ಕಡುವಾಳೆ, ಉದ್ದಟ್ಟಿ, ಒಡೆಯರಪಾಳ್ಯ, ಪಿ.ಜಿ. ಪಾಳ್ಯ, ಚನ್ನಾಲಿಂಗನಹಳ್ಳಿ, ಕಣ್ಣೂರು ಸೇರಿದಂತೆ ಈ ಭಾಗದ ಇನ್ನಿತರ ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ದರು.