ಹನೂರು: ಕಳೆದ 2 ದಿನಗಳಿಂದ ಸುರಿದ ಜೋರು ಮಳೆಗೆ ಪಟ್ಟಣದ ಪರಿಶಿಷ್ಟ ಜಾತಿ ಸಮುದಾಯದ ಸ್ಮಶಾನಕ್ಕೆ ತೆರಳುವ ಮಾರ್ಗದಲ್ಲಿನ ಸೇತುವೆ ಕೊಚ್ಚಿ ಹೋಗಿದ್ದು, ಸ್ಥಳಕ್ಕೆ ಭಾನುವಾರ ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಸಮುದಾಯದ ಮುಖಂಡರು ಮಾತನಾಡಿ, ಸ್ಮಶಾನಕ್ಕೆ ತೆರಳುವ ಮಾರ್ಗದ ಸ್ವಾಮಿಹಳ್ಳದಲ್ಲಿ ಮಳೆಗಾಲದ ವೇಳೆ ಯತೇಚ್ಛವಾದ ನೀರು ಹರಿಯುತ್ತಿತ್ತು. ಇದರಿಂದ ಶವ ಸಂಸ್ಕಾರಕ್ಕೆ ತೆರಳಲು ತುಂಬ ತೊಂದರೆಯಾಗಿತ್ತು. ಹೀಗಾಗಿ 2017 ರಲ್ಲಿ ಅಂದಿನ ಸಂಸದ ಆರ್. ಧ್ರುವನಾರಾಯಣ ಅವರು ಸೇತುವೆಯನ್ನು ನಿರ್ಮಿಸಿಕೊಟ್ಟಿದ್ದರು. ಇದರಿಂದ ಅನುಕೂಲವಾಗಿತ್ತು. ಆದರೆ ಕಳೆದ 2 ದಿನಗಳಿಂದ ಸುರಿದ ಜೋರು ಮಳೆಗೆ ಸ್ವಾಮಿಹಳ್ಳದಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದೆ. ಇದರಿಂದ ಶವ ಸಂಸ್ಕಾರಕ್ಕೆ ತೆರಳಲು ತೊಂದರೆಯಾಗಿದೆ. ಆದ್ದರಿಂದ ಈ ಬಗ್ಗೆ ಮುತುರ್ವಜಿ ವಹಿಸಿ ರಿಪೇರಿ ಪಡಿಸುವಂತೆ ಮನವಿ ಮಾಡಿದರು.
ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರ ರಿಪೇರಿ ಪಡಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕ ಮಹದೇವಸ್ವಾಮಿ, ಮುಖಂಡರಾದ ಸಿದ್ದರಾಜು, ಪುಟ್ಟಸ್ವಾಮಿ, ಪ್ರಭುಸ್ವಾಮಿ, ವಿಜಯಕುಮಾರ್, ವೆಂಕಟೇಶ್ ಹಾಗೂ ಇನ್ನಿತರರಿದ್ದರು.