ಜಿಲ್ಲೆ

ಜಮೀನುಗಳಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಭೇಟಿ

ಕಿರಣ್ ಮಾದರಹಳ್ಳಿ

ಹನೂರು: ಕಳೆದ 3 ದಿನಗಳ ಕಾಲ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮದ ಜಮೀನುಗಳಿಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗಸ್ವಾಮಿ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದರು.

ತಾಲೂಕು ವ್ಯಾಪ್ತಿಯಲ್ಲಿ ಕಳೆದ 2 ತಿಂಗಳ ಹಿಂದೆ ಉತ್ತಮ ಮಳೆಯಾಗಿದ್ದರಿಂದ ಈ ಭಾಗದ ರೈತರು ಹೆಚ್ಚಾಗಿ ಮುಸುಕಿನ ಜೋಳ, ರಾಗಿ ಹಾಗೂ ನೆಲಗಡಲೆಯನ್ನು ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಆಗಾಗ್ಗೆ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಪೈರುಗಳು ಉತ್ತಮವಾಗಿ ಬಂದಿದ್ದವು. ಆದರೆ ಒಂದು ತಿಂಗಳ ಕಾಲ ಮಳೆ ಬೀಳದ ಪರಿಣಾಮ ಕೆಲವು ಜಮೀನುಗಳಲ್ಲಿ ಅರ್ಧಂಬರ್ಧ ಪೈರುಗಳು ಬಂದಿದ್ದರೆ, ಬಹುತೇಕ ಜಮೀನುಗಳಲ್ಲಿ ಪೈರುಗಳು ಬಿಸಿಲಿನ ತಾಪಕ್ಕೆ ಸೊರಗುತ್ತಿದ್ದವು. ಇದರಿಂದ ರೈತರನ್ನು ಚಿಂತೆಗೀಡು ಮಾಡಿತ್ತು. ಆದರೆ ಕಳೆದ 3 ದಿನಗಳ ಕಾಲ ತಾಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದ್ದರಿಂದ ಸೊರಗುತ್ತಿದ್ದ ಪೈರುಗಳು ಅಚ್ಚ ಹಸಿರಿನತ್ತ ಕೂಡಿದ್ದವು. ಇದರಿಂದ ರೈತರು ಜಮೀನಿನತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆಯನ್ನು ಕೈಗೊಂಡಿದ್ದರು.

ಈ ಬಗ್ಗೆ ಸೋಮವಾರದ ವಿಜಯವಾಣಿ ಸಂಚಿಕೆಯಲ್ಲಿ ‘ಬೆಳೆಗೆ ಜೀವಕಳೆ ಕೃಷಿ ಚಟುವಟಿಕೆ ಬಿರುಸು’ ಶೀರ್ಷಿಕೆಯಡಿ ವಿಸ್ತತ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ರಂಗಸ್ವಾಮಿ ಅವರು ಸಿಬ್ಬಂದಿಯೊಂದಿಗೆ ಜಮೀನುಗಳಿಗೆ ತೆರಳಿ ಪೈರುಗಳ ಬೆಳವಣಿಗೆಯನ್ನು ವೀಕ್ಷಿಸಿದರು.

ರಂಗಸ್ವಾಮಿ ಅವರು ವಿಜಯವಾಣಿಯೊಂದಿಗೆ ಮಾತನಾಡಿ, ಬಿಸಿಲಿನ ತಾಪಕ್ಕೆ ಒಣಗುತ್ತಿದ್ದ ಪೈರುಗಳು ಮಳೆಯಿಂದಾಗಿ ಚೇತರಿಸಿಕೊಳ್ಳುತ್ತಿದ್ದು, ಹಸಿರಿನತ್ತ ಸಾಗುತ್ತಿವೆ. ಇದರಿಂದ ರೈತಾಪಿ ವರ್ಗದಲ್ಲಿ ಕೊಂಚ ಸಮಾಧಾನ ಮೂಡಿಸಿದೆ. ಆಗಾಗ್ಗೆ ಮಳೆಯಾದರೆ ಉತ್ತಮ ಫಸಲನ್ನು ಪಡೆಯಬಹುದಾಗಿದೆ. ಈ ಬಗ್ಗೆ ಜಮೀನುಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಲಾಗುತ್ತಿದ್ದು, ರೈತರಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು. ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ವಿನಾಯಕ, ಕೃಷಿ ಸಖಿ ಚೈತ್ರಾ, ಸಿಬ್ಬಂದಿ ಸುನೀಲ್ ಹಾಗೂ ಸಂತೋಷ್ ಇದ್ದರು.