ಹನೂರು: ಶ್ರೀ ಕ್ಷೇತ್ರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ದಾಸೋಹದಲ್ಲಿ ರುಚಿ ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳು, ಸ್ನಾನಗೃಹ, ಶೌಚಗೃಹಗಳು ಶುಚಿತ್ವದಿಂದ ಕೂಡಿರಬೇಕು. ಸಮರ್ಪಕ ಬಸ್ ಸೌಕರ್ಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು…
ಇದು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಶನಿವಾರ ಮಹಾಲಯ ಅಮಾವಾಸ್ಯೆ, ದಸರಾ, ದೀಪಾವಳಿ ಹಾಗೂ ಕಾರ್ತಿಕ ಜಾತ್ರಾ ಮಹೋತ್ಸವದ ಸಂಬಂಧ ಅಗತ್ಯ ಸಿದ್ಧತೆ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅಧಿಕಾರಿಗಳಿಗೆ ನೀಡಿದ ಸಲಹೆಗಳು.
ಮ.ಬೆಟ್ಟದಲ್ಲಿ ನಡೆಯುವ ಜಾತ್ರೆಗೆ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹಾಗಾಗಿ ಭಕ್ತರಿಗೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆದ್ದರಿಂದ ಪ್ರತಿಯೊಬ್ಬರೂ ಕಾರ್ಯಪ್ರವೃತರಾಗಬೇಕು. ಆತ್ಮಸಾಕ್ಷಿಗೆ ಅನುಸಾರವಾಗಿ ಕಾರ್ಯ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಮೂಲ ಸೌಕರ್ಯ ಕೊರತೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕು. ಕಾಲ್ನಡಿಗೆಯಲ್ಲಿ ಆಗಮಿಸುವ ಭಕ್ತರಿಗೆ ತಾಳುಬೆಟ್ಟದಿಂದ ಮ.ಬೆಟ್ಟದವರೆಗೆ ಸಿಲ್ವರ್ ಟ್ಯಾಂಕ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕದ ಟ್ಯಾಂಕ್‌ಗಳನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು. ಭಕ್ತರು ತಂಗಲು ನೆರಳಿನ ವ್ಯವಸ್ಥೆ ಒದಗಿಸಬೇಕು. ಸ್ನಾನಗೃಹಗಳು, ಶೌಚಗೃಹಗಳಲ್ಲಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸುವುದರ ಮೂಲಕ ಸರಿಯಾಗಿ ನಿರ್ವಹಣೆಯಾಗಬೇಕು ಎಂದರು.
ದಾಸೋಹದಲ್ಲಿ ನೀಡಲಾಗುವ ಪ್ರಸಾದದಲ್ಲಿ ಇನ್ನಷ್ಟು ರುಚಿ ಹಾಗೂ ಗುಣಮಟ್ಟ ಹೆಚ್ಚಾಗಬೇಕು. ಈ ಸಂಬಂಧ ಪ್ರತಿನಿತ್ಯ ಪ್ರಸಾದವನ್ನು ಪರೀಕ್ಷಿಸಬೇಕು. ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ಬಸ್ ಸೌಕರ್ಯ ಹಾಗೂ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಈ ಮೂಲಕ ಭಕ್ತರಿಗೆ ಉತ್ತಮ ಸೇವೆ ಒದಗಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು. ಆದ್ದರಿಂದ ಪ್ರತಿಯೊಬ್ಬರೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವುದರ ಮೂಲಕ ಜಾತ್ರೆಯು ಸುಸೂತ್ರವಾಗಿ ನೆರವೇರಬೇಕು. ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು ಎಂದು ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಅವರಿಗೆ ಶಾಸಕರು ಸೂಚಿಸಿದರು.
ಬಸ್‌ಗಳಿಂದ ಆದಾಯ ಬರಬೇಕು:
ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಧಿಕಾರ ಬಸ್ ಸೌಕರ್ಯವನ್ನು ಒದಗಿಸುತ್ತಿದೆ. ಆದರೆ ಬಸ್ಸಿನಿಂದ ನಷ್ಟವಾಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಆದ್ದರಿಂದ ಬಸ್ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಯಾಗಬೇಕು. ಪ್ರಾಧಿಕಾರಕ್ಕೆ ಆದಾಯ ಬರುವಂತೆ ಮಾನದಂಡವನ್ನು ಅನುಸರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬಸ್ ನಿರ್ವಹಣೆಯ ಮೇಲ್ವಿಚಾರಕರಿಗೆ ಶಾಸಕರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಇನ್ನು ಹನೂರಿನಿಂದ ಮ.ಬೆಟ್ಟದವರೆಗೆ ಅಲ್ಲಲ್ಲಿ ರಸ್ತೆ ದುರಸ್ತಿಗೆ ಅಗತ್ಯ ಕ್ರಮವಹಿಸುವಂತೆ ಪಿಡಬ್ಲುೃಡಿ ಎಇಇ ಚಿನ್ನಣ್ಣ ಅವರಿಗೆ ಸೂಚಿಸಿದರು.
ಪ್ರಾಧಿಕಾರದಿಂದ ಅಗತ್ಯ ಸಿದ್ಧತೆ:
ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಮಾತನಾಡಿ, ಮ.ಬೆಟ್ಟದಲ್ಲಿ ಸೆ.30 ರಿಂದ ಅ.2ರವರೆಗೆ ಮಹಾಲಯ ಅಮಾವಾಸ್ಯೆ, ಅ.3 ರಿಂದ 12ರವರೆಗೆ ದಸರಾ, 29 ರಿಂದ ನ.2ರವರೆಗೆ ದೀಪಾವಳಿ ಹಾಗೂ ನ.4 ರಿಂದ ಡಿ.1 ರವರೆಗೆ ಕಾರ್ತಿಕ ಸೋಮವಾರ ಜಾತ್ರಾ ಮಹೋತ್ಸವವು ಜರುಗಲಿದ್ದು, ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಈಗಾಗಲೇ ಪ್ರಾಧಿಕಾರದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶುದ್ಧ ಕುಡಿಯುವ ಘಟಕಗಳಿಗೆ ನೀರು ಪೂರೈಕೆ, ಜನಸಂದಣಿ ಸ್ಥಳಗಳಲ್ಲಿ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ, ಭಕ್ತರು ದೇವರ ದರ್ಶನ ಪಡೆಯಲು ತೆರಳಲು ಸರತಿ ಸಾಲು ಹಾಗೂ ವಿಶೇಷ ದಾಸೋಹಕ್ಕೆ ವಾಟರ್ ಪ್ರೂಫ್ ಶಾಮಿಯಾನ ಅಳವಡಿಸಲು ಸಿದ್ಧತೆ ನಡೆಸಲಾಗಿದೆ.
ಸ್ವಚ್ಛತೆಗೆ 142 ಮಂದಿಯನ್ನು ನಿಯೋಜಿಸಲಾಗಿದೆ. ಸ್ನಾನಗೃಹ, ಶೌಚಗೃಹಗಳ ಸ್ವಚ್ಛತೆಗೆ ಗಮನಹರಿಸಲಾಗಿದೆ. ದೇವರ ದರ್ಶನ ಪಡೆಯಲು 500 ರೂ. ಹಾಗೂ 250 ರೂ. ಟಿಕೆಟ್‌ನ ವಿಶೇಷ ಕೌಂಟರ್ ವ್ಯವಸ್ಥೆ, ವಾಹನಗಳಿಗೆ ಪಾರ್ಕಿಂಗ್ ಸೌಕರ್ಯ, 300 ಹೆಚ್ಚುವರಿ ಬಸ್ ಬಿಡುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಗತ್ಯ ವೈದ್ಯ, ಸಿಬ್ಬಂದಿಯನ್ನು ನಿಯೋಜಿಸಲು ತಿಳಿಸಲಾಗಿದೆ. ದೇಗುಲದ ಒಳ ಹಾಗೂ ಹೊರಾಂಗಣದಲ್ಲಿ ಹೂವಿನ ಅಲಂಕಾರ, ವಿದ್ಯುತ್ ದೀಪಾಲಂಕಾರ, ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರುಶೇಖರ್, ವೈದ್ಯೆ ಡಾ.ಜಾಹ್ನವಿ, ಇನ್ಸ್‌ಪೆಕ್ಟರ್ ಜಗದೀಶ್, ಸಬ್ ಇನ್ಸ್‌ಪೆಕ್ಟರ್ ಬಸವರಾಜು, ಪಿಡಿಒ ಕಿರಣ್‌ಕುಮಾರ್, ಸೆಸ್ಕ್ ಜೆಇ ಮಹೇಶ್, ಪ್ರಾಧಿಕಾರದ ನೌಕರರಾದ ಸ್ವಾಮಿ, ಮಹದೇವಸ್ವಾಮಿ, ಮಹೇಶ್, ರವೀಂದ್ರ ಇನ್ನಿತರರು ಇದ್ದರು.