ಹನೂರು: ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸದೊಡ್ಡಿ ಗ್ರಾಮದ ಜಮೀನೊಂದರ ಮನೆಯೊಂದಕ್ಕೆ ಶನಿವಾರ ಬೆಳಗ್ಗೆ ನುಗ್ಗಿದ ಇಬ್ಬರು ಖದೀಮರು ಮನೆಯಲ್ಲಿದ್ದ ವ್ಯಕ್ತಿಯನ್ನು ಕಟ್ಟಿಹಾಕಿ 168 ಗ್ರಾಂ ಚಿನ್ನಾಭರಣ ಹಾಗೂ 41 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.
ಗ್ರಾಮದ ಜಗದೀಶ ರೆಡ್ಡಿ ಎಂಬುವರು ಗ್ರಾಮದ ಸಮೀಪವಿರುವ ಜಮೀನಿನಲ್ಲಿ ಮನೆ ನಿರ್ಮಿಸಿ ಅಲ್ಲಿಯೇ ಕುಟುಂಬಸ್ಥರ ಜತೆ ವಾಸವಿದ್ದರು. ಬೆಳಗ್ಗೆ 6ಗಂಟೆಗೆ ಜಗದೀಶ್ ಪತ್ನಿ ರುಕ್ಮಿಣಿ ಹಾಲು ಹಾಕಲು ಕೌದಳ್ಳಿ ಗ್ರಾಮದ ಡೇರಿಗೆ ತೆರಳಿದ್ದರು. ಸುಮಾರು 6.30ರಲ್ಲಿ ಮನೆಯ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಕುಡಿಯುವ ನೀರು ಕೇಳಿದ್ದಾರೆ. ನೀರು ತರಲು ಮನೆಯೊಳಗೆ ಹೋದ ಜಗದೀಶ್ ರೆಡ್ಡಿ ಅವರನ್ನು ಹಿಂಬಾಲಿಸಿ ಅವರ ಕೈ ಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಅಂಟಿಸಿದ್ದಾರೆ. ದೇವರ ಕೋಣೆಯಲ್ಲಿದ್ದ ಬೀರು ಬಾಗಿಲು ಮುರಿದು ಅದರಲಿದ್ದ 48 ಗ್ರಾಂ ತೂಕದ 2 ಚಿನ್ನದ ಸರ, 32 ಗ್ರಾಂನ ತಾಳಿ, 32 ಗ್ರಾಂನ ಚಿನ್ನದ ಸರ, 24 ಗ್ರಾಂ ತೂಕದ 6 ಚಿನ್ನದ ಓಲೆ, 4 ಗ್ರಾಂನ 1 ಮಾಟಿ, 8 ಗ್ರಾಂವುಳ್ಳ 3 ಚಿನ್ನದ ನಾಣ್ಯ, 4 ಗ್ರಾಂನ ಒಂದು ಚಿನ್ನದ ನಾಣ್ಯ ಹಾಗೂ 41 ಸಾವಿರ ರೂ. ದೋಚಿ ಪರಾರಿಯಾಗಿದ್ದಾರೆ.
ಕೆಲ ಹೊತ್ತಿನ ಬಳಿಕ ಮನೆಗೆ ಆಗಮಿಸಿದ ಸಹೋದರ ಧರ್ಮರೆಡ್ಡಿ, ಜಗದೀಶ್ ರೆಡ್ಡಿ ನರಳಾಡುತ್ತಿರುವುದನ್ನು ನೋಡಿ ಗಾಬರಿಗೊಂಡು ಕಟ್ಟಿದ್ದ ಕೈ ಕಾಲನ್ನು ಬಿಚ್ಚಿದ್ದಾರೆ. ಬಳಿಕ ಚಿನ್ನಾಭರಣ ಹಾಗೂ ಹಣ ದೋಚಿದ್ದ ಬೀರು ಪರಿಶೀಲಿಸಿ ಪೋಲಿಸರಿಗೆ ಮಾಹಿತಿ ತಿಳಿಸಿದರು. ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಧರ್ಮೇಂದ್ರ, ಇನ್ಸ್‌ಪೆಕ್ಟರ್ ಶಶಿಕುಮಾರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಈಶ್ವರ್ ಹಾಗೂ ಲೋಕೇಶ್ ಕುಟುಂಬಸ್ಥರಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ 15 ದಿನಗಳ ಹಿಂದೆ ಹನೂರಿನ ಡಾಲರ್ ಕಾಲನಿಯ ಮನೆಯೊಂದರಲ್ಲಿ 386 ಗ್ರಾಂ ಚಿನ್ನಾಭರಣ ಹಾಗೂ 20 ಲಕ್ಷ ರೂ. ಕಳವಾಗಿತ್ತು. ಇದರ ಬೆನ್ನಲ್ಲೇ ಇದೀಗ ಹೊಸದೊಡ್ಡಿ ಗ್ರಾಮದ ಜಮೀನೊಂದರ ಮನೆಯಲ್ಲಿ ಕಳ್ಳತನವಾಗಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ಕಳ್ಳರನ್ನು ಪತ್ತೆಹಚ್ಚಿ ಬಂಧಿಸದ ಪೊಲೀಸರ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.