ಜಿಲ್ಲೆ

15 ದಿನದೊಳಗೆ ರೈತರ ಸಮಸ್ಯೆಗಳನ್ನು ಬಗೆಹರಿಸಿ

ಕಿರಣ್ ಮಾದರಹಳ್ಳಿ

ಹನೂರು: ತಾಲೂಕಿನ ರೈತರ ಸಮಸ್ಯೆಗಳನ್ನು 15 ದಿನಗಳೊಳಗೆ ಬಗೆಹರಿಸದಿದ್ದಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಅವರ ಮನೆ ಮುಂದೆ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಎಚ್ಚರಿಸಿದರು.

ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರೈತ ಮುಖಂಡರ ಸಭೆಯಲ್ಲಿ ಸಮಸ್ಯೆ ಆಲಿಸಿ ಮಾತನಾಡಿದರು. ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‌ಲೈನ್ ಕಾಮಗಾರಿಯನ್ನು ಕೈಗೊಂಡು ಹಲವು ವರ್ಷಗಳಾದರೂ ಪೂರ್ಣಗೊಂಡಿಲ್ಲ. ಗುಳ್ಯ ಗ್ರಾಮ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಪಿ.ಜಿ.ಪಾಳ್ಯ , ಒಡೆಯರಪಾಳ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸವಾರರು ಹರಸಾಹಸದಿಂದ ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನರು ಮೂಲಸೌಕರ್ಯದಿಂದ ವಂಚಿತರಾಗಿದ್ದು ತುಂಬ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ಉಡುತೊರೆ ಜಲಾಶಯದಿಂದ ಎಲ್ಲೇಮಾಳದ ಹಳ್ಳಕ್ಕೆ ನೀರು ಹರಿಸಬೇಕು. ಕಾವೇರಿ ನದಿ ಮೂಲದಿಂದ ಹುಬ್ಬೆಹುಣಸೆ ಡ್ಯಾಂಗೆ ನೀರು ತುಂಬಿಸಬೇಕು. ಆಂಡಿಪಾಳ್ಯದಲ್ಲಿ ಚೆಕ್ ಡ್ಯಾಂ ನಿರ್ಮಾಣವಾಗಬೇಕು. ತಾಲೂಕಿನ ಕೆಲವು ಗ್ರಾಮಗಳಲ್ಲಿ ಒತ್ತುವರಿಯಾಗಿರುವ ಗೋಮಾಳ ಹಾಗೂ ಬಂಡಿ ದಾರಿಗಳನ್ನು ತೆರವುಗೊಳಿಸಬೇಕು. ಜಾನುವಾರುಗಳನ್ನು ಮೇಯಿಸುವುದಕ್ಕೆ ಅರಣ್ಯ ಇಲಾಖೆ ಕಿರುಕುಳ ನೀಡುತ್ತಿರುವುದು ತಪ್ಪಬೇಕು. ಪಿಜಿ ಪಾಳ್ಯ ಹಾಗೂ ಎಲ್ಲೇಮಾಳ ಗ್ರಾಮದಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಆರಂಭಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಗಮನಹರಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಸದಸ್ಯ ಗೌಡಳ್ಳಿ ಸೋಮಣ್ಣ, ತಾಲೂಕು ಅಧ್ಯಕ್ಷ ಮಲ್ಲಯ್ಯನಪುರ ಚಿಕ್ಕರಾಜು, ಉಪಾಧ್ಯಕ್ಷ ಪ್ರಕಾಶ್, ಗೌರವಾಧ್ಯಕ್ಷ ಪ್ರಭುಸ್ವಾಮಿ, ಕಾರ್ಯದರ್ಶಿ ಪವನ್‌ಕುಮಾರ್, ರೈತ ಮುಖಂಡರಾದ ಮೋಹನ್, ಮಹದೇವಸ್ವಾಮಿ, ಜಗದೀಶ್, ಬಾಲಕೃಷ್ಣ, ಕೃಷ್ಣಯ್ಯ, ರಾಜೇಂದ್ರ ಪ್ರಸಾದ್ ಇತರರಿದ್ದರು.