ಜಿಲ್ಲೆ

ನಾಲೆಗಳಲ್ಲಿ ಹೂಳು, ಗಿಡಗಂಟಿ ತೆರವುಗೊಳಿಸಿ

ಕಿರಣ್ ಮಾದರಹಳ್ಳಿ

ಹನೂರು: ನಾಲೆಗಳಲ್ಲಿನ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸುವುದರ ಮೂಲಕ ಜಮೀನುಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ಅಗತ್ಯ ಕ್ರಮವಹಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಸೂಚಿಸಿದರು.

ತಾಲೂಕಿನ ಅಜ್ಜೀಪುರ ಸಮೀಪದ ಉಡುತೊರೆ ಜಲಾಶಯದ ನಾಲೆ ಸಮೀಪದಲ್ಲಿ ಗುರುವಾರ ಹೂಳೆತ್ತುವ ಕಾಮಗಾರಿಗೆ ಚಾಲನೆ ಮಾತನಾಡಿದ ಅವರು, ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ನೂರಾರು ರೈತರು ಹಲವು ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ.ನೀರಾವರಿ ಸೌಕರ್ಯವನ್ನು ಕಲ್ಪಿಸುವ ಉದ್ದೇಶದಿಂದ ಎಡ ಹಾಗೂ ಬಲದಂಡೆ ನಾಲೆಗಳನ್ನು ನಿರ್ಮಿಸಲಾಗಿದೆ. ಆದರೆ, ಕೆಲವು ಕಡೆಗಳಲ್ಲಿ ನಾಲೆ ದುರಸ್ತಿಗೊಂಡಿದ್ದರೆ ಬಹುತೇಕ ಕಡೆಗಳಲ್ಲಿ ಹೂಳು ತುಂಬಿದ್ದು, ಗಿಡಗಂಟಿಗಳು ಬೆಳೆದಿತ್ತು. ಹಾಗಾಗಿ ಪ್ರಸ್ತುತ ಡ್ಯಾಂ ಭರ್ತಿಯಾಗಿದ್ದು ನಾಲೆಗಳಿಗೆ ನೀರು ಹರಿಸಿದರೂ ಜಮೀನುಗಳಿಗೆ ತಲುಪುತ್ತಿರಲಿಲ್ಲ. ಇದರಿಂದ ನೀರು ವ್ಯರ್ಥವಾಗುತ್ತಿತ್ತು, ಸಮರ್ಪಕ ನೀರಾವರಿ ಸೌಕರ್ಯವನ್ನು ಒದಗಿಸುವಂತೆ ಈ ಭಾಗದ ರೈತರು ಮನವಿ ಮಾಡಿದ್ದರು. ಹಾಗಾಗಿ 2 ತಿಂಗಳ ಹಿಂದೆ ಅಧಿಕಾರಿಗಳೊಂದಿಗೆ ನಾಲೆಗಳಿಗೆ ಖುದ್ದು ಭೇಟಿ ನೀಡಿ ವಾಸ್ತವತೆಯನ್ನು ತಿಳಿಯಲಾಗಿತ್ತು. ಹೂಳೆತ್ತುವ ಕಾಮಗಾರಿ ಕೈಗೊಳ್ಳಲು ಕ್ರಿಯಾಯೋಜನೆ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಇದೀಗ ಅನುಮೋದನೆ ದೊರೆತು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಸಮರ್ಪಕ ನೀರಾವರಿ ಸೌಕರ್ಯ ಸಿಗಲಿದೆ ಎಂದು ತಿಳಿಸಿದರು.

ಬಳಿಕ ಬಸಪ್ಪನ ದೊಡ್ಡಿ ಹಾಗೂ ಅಜ್ಜೀಪುರ ಭಾಗದಲ್ಲಿ ಒತ್ತುವರಿಯಾಗಿದ್ದ ನಾಲೆ ರಸ್ತೆಯನ್ನು ತೆರವುಗೊಳಿಸಿ ಸಸಿ ನೆಡಲಾಯಿತು. ಈ ಸಂದರ್ಭ ಗ್ರಾಪಂ ಅಧ್ಯಕ್ಷ ರುದ್ರನಾಯ್ಕ, ಉಪಾಧ್ಯಕ್ಷ ಪ್ರಭುಸ್ವಾಮಿ, ಪಿಡಿಒ ನಂದೀಶ್, ಕಾರ್ಯದರ್ಶಿ ಶ್ರೀನಿವಾಸ್ ಇತರರಿದ್ದರು.