ಜಿಲ್ಲೆ

ಶ್ರೀಗಂಧ ಮರದ ಖದೀಮರ ಬಂಧನ

ಕಿರಣ್ ಮಾದರಹಳ್ಳಿ

ಹನೂರು: ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಪಿ.ಜಿ. ಪಾಳ್ಯ ವನ್ಯಜೀವಿ ವಲಯದ ಲೊಕ್ಕನಹಳ್ಳಿ ಗಸ್ತಿನ ದೊಡ್ಡಕೋಬೆ ಹಳ್ಳ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಸಂಜೆ ಬೈಕ್‌ನಲ್ಲಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ತಾಲೂಕಿನ ಸತ್ಯಮಂಗಲ ಗ್ರಾಮದ ಮಾದರಾಜು (34), ಎಂ. ನಾಗೇಂದ್ರ (23) ಬಂಧಿತರು. ಇದೇ ಗ್ರಾಮದ ಮೂರ್ತಿ ತಲೆಮರೆಸಿಕೊಂಡಿದ್ದು ಈತನ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಈ ಮೂವರು ಆರೋಪಿಗಳು ದೊಡ್ಡಕೋಬೆ ಹಳ್ಳ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿ ಶ್ರೀಗಂಧದ ಮರ ಕಡಿದು ಅದನ್ನು ತುಂಡುಗಳಾಗಿ ಪರಿವರ್ತಿಸಿ ಬೈಕ್‌ನಲ್ಲಿ ಸಾಗಿಸುತ್ತಿದ್ದರು. ಈ ಬಗ್ಗೆ ಗಸ್ತಿನಲ್ಲಿದ್ದ ಸಿಬ್ಬಂದಿ ಗಮನಕ್ಕೆ ಬಂದಿದೆ. ಬಳಿಕ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದಾಗ ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದರು. ಮತ್ತೊಬ್ಬ ಪರಾರಿಯಾದನು.


ಬಂಧಿತರಿಂದ 9 ಕೆಜಿ ಹಸಿ ಶ್ರೀಗಂಧದ ತುಂಡು ಹಾಗೂ ಬೈಕ್ ವಶಪಡಿಸಿಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಗಳಿಬ್ಬರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಸೆರೆಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ. ಕಾರ್ಯಾಚರಣೆಯಲ್ಲಿ ಡಿಸಿಎಫ್ ಡಾ.ಸಂತೋಷ್‌ಕುಮಾರ್, ಎಸಿಎಫ್ ಶಿವರಾಮ್, ಆರ್‌ಎಫ್‌ಒ ಭರತ್, ಡಿಆರ್‌ಎಫ್‌ಒ ಕೃಷ್ಣಪ್ಪನಾಯಕ, ಗಸ್ತು ಅರಣ್ಯ ಪಾಲಕರಾದ ವಿಠಲ ಭೀರಪ್ಪ ಶಿರಗಾಂವಿ, ಯಮನಪ್ಪ ಬಾಳಪ್ಪ ಮೆಳವಂಕಿ ಹಾಗೂ ಆರ್. ರಂಗಸ್ವಾಮಿ ಭಾಗವಹಿಸಿದ್ದರು.