ಹನೂರು: ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಏಕರೂಪ ತಂತ್ರಾಂಶವನ್ನು ಜಾರಿಗೊಳಿಸಿರುವುದು ರೈತರಿಗೆ ಅನುಕೂಲಕರವಾಗಿದೆ ಎಂದು ಚಾಮುಲ್ ವಿಸ್ತರಣಾಧಿಕಾರಿ ಎಂ.ವೆಂಕಟೇಶ್ ತಿಳಿಸಿದರು.
ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಗುರುವಾರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ 15 ವಿವಿಧ ಹಾಲು ಒಕ್ಕೂಟಗಳಿದ್ದು, ವ್ಯವಹಾರ ನಿರ್ವಹಣೆಗೆ ಹಲವು ತಂತ್ರಾಂಶಗಳಿವೆ. ಚಾಮುಲ್ ಒಕ್ಕೂಟದಲ್ಲಿ 12 ತಂತ್ರಾಂಶವನ್ನು ಒಳಗೊಂಡಿದೆ. ಹನೂರು ತಾಲೂಕಿನಲ್ಲಿ 90 ಹಾಲು ಉತ್ಪಾದಕರ ಸಂಘ ಹಾಗೂ 72 ಎಎಂಸಿ ಕೇಂದ್ರವನ್ನು ಹೊಂದಿದೆ. ಈ ಹಿಂದೆ ರೈತರು ಹಾಲು ವಿತರಣೆ, ಹಣ ಪಡೆಯುವಿಕೆ ಸಂಬಂಧ ಹಾಗೂ ಇನ್ನಿತರ ಮಾಹಿತಿಯನ್ನು ಪಡೆಯಬೇಕಾದರೆ ಸಂಘಕ್ಕೆ ನೇರವಾಗಿ ಆಗಮಿಸಬೇಕಿತ್ತು. ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡ ಕರ್ನಾಟಕ ಹಾಲು ಮಹಾಮಂಡಳಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ಧೇಶದಿಂದ ರಾಜ್ಯದ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲೂ ಏಕರೂಪ ತಂತ್ರಾಂಶವನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದ್ದು, ತಾಲೂಕಿನಲ್ಲಿ ಈ ಕಾರ್ಯ ಶೇ. 80ರಷ್ಟು ಮುಗಿದಿದೆ. ಮುಂದಿನ ದಿನಗಳಲ್ಲಿ ಎಲ್ಲ ಸಂಘಗಳಲ್ಲೂ ಈ ತಂತ್ರಾಂಶ ಅಳವಡಿಕೆಯಾಗಲಿದೆ. ಆದ್ದರಿಂದ ರೈತರು ಇದರ ಪ್ರಯೋಜನ ಪಡೆದುಕೊಳ್ಳುವುದರ ಮೂಲಕ ಸಂಘಕ್ಕೆ ಗುಣಮಟ್ಟದ ಹಾಲನ್ನು ಪೂರೈಸಬೇಕು. ಸಂಘದ ವತಿಯಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.
ಸಂಘಕ್ಕೆ 7.20 ಲಕ್ಷ ರೂ ಲಾಭ: ಹನೂರಿನ ಸಂಘದಲ್ಲಿ ಹಾಲು ಪೂರೈಸುವ 180 ಸದಸ್ಯರಿದ್ದು, ಪ್ರತಿನಿತ್ಯ ಸುಮಾರು 2,250 ಲೀಟರ್‌ವರೆಗೆ ಹಾಲು ಸಂಗ್ರಹವಾಗುತ್ತದೆ. ಹಾಲು ಮಾರಾಟ, ಪಶು ಆಹಾರ ಖರೀದಿ ಹಾಗೂ ಇನ್ನಿತರ ಖರ್ಚು ವೆಚ್ಚಗಳನ್ನು ಕಳೆದ ಈ ಸಾಲಿನಲ್ಲಿ ಸಂಘಕ್ಕೆ 7,20,080 ರೂ. ಲಾಭ ಗಳಿಸಿದ್ದು, ವಿವಿಧ ನಿಧಿ, ಉತ್ಪಾದಕರು ಹಾಗೂ ನೌಕರರ ಬೋನಸ್‌ಗೆ ವಿನಿಯೋಗಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಚಾಮುಲ್ ನಿರ್ದೇಶಕರಾದ ಶಾಹುಲ್ ಅಹಮದ್, ಮಹದೇವಸ್ವಾಮಿ, ಸಂಘದ ಅಧ್ಯಕ್ಷ ವಿ.ಪ್ರದೀಪ್, ಉಪಾಧ್ಯಕ್ಷ ನಾಗಣ್ಣ, ನಿರ್ದೇಶಕರಾದ ಹರೀಶ್, ನಾರಾಯಣ ನಾಯ್ಡು, ರೇವಣ್ಣ, ಮುನೇಂದ್ರಸ್ವಾಮಿ, ಸಿದ್ದರಾಜು, ಜಯಮ್ಮ, ಚಿಕ್ಕತಾಯಮ್ಮ, ವಿಸ್ತರಣಾಧಿಕಾರಿಗಳಾದ ಶರತ್, ರಘು, ಸಿಇಒ ಆರ್.ರವೀಂದ್ರ ಹಾಗೂ ಹಾಲು ಉತ್ಪಾದಕರು ಇದ್ದರು.