ಜಿಲ್ಲೆ

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕು ಮೇಲುಗೈ

ಕಿರಣ್ ಮಾದರಹಳ್ಳಿ

ಹನೂರು: ಚಾಮರಾಜನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳು ವಿವಿಧ ಪಂದ್ಯಗಳಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ವಿಭಾಗೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಶೈಕ್ಷಣಿಕ ವಲಯದ ಎಲ್ಲೇಮಾಳ ಸರ್ಕಾರಿ ಪ್ರೌಢಶಾಲೆ, ಥ್ರೋ ಬಾಲ್‌ನಲ್ಲಿ ಕೌದಳ್ಳಿ ಸೆಂಟ್ ಮೇರಿಸ್ ಶಾಲೆ, ಖೋ-ಖೋದಲ್ಲಿ ಮ.ಬೆಟ್ಟದ ಶ್ರೀ ಮಹದೇಶ್ವರ ಪ್ರೌಢಶಾಲೆ ಪ್ರಥಮ ಸ್ಥಾನ ಗಳಿಸಿದ್ದರೆ, ಬಾಲಕರ ವಿಭಾಗದಲ್ಲಿ ಖೋ-ಖೋದಲ್ಲಿ ಚನ್ನಾಲಿಂಗನಹಳ್ಳಿ ಸರ್ಕಾರಿ ಪ್ರೌಢಶಾಲೆ, ಕಣ್ಣೂರು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಮ.ಬೆಟ್ಟದ ಶ್ರೀ ಮಹದೇಶ್ವರ ಪ್ರೌಢಶಾಲೆ ಹಾಗೂ ಥ್ರೋ ಬಾಲ್‌ನಲ್ಲಿ ಹಳೇ ಮಾರ್ಟಳ್ಳಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಗಳಿಸಿ ವಿಭಾಗೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಸಾಧನೈಗೈದ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ತರಬೇತಿ, ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಬಿಇಒ ಗುರುಲಿಂಗಯ್ಯ ಹಾಗೂ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾದೇವ ಅಭಿನಂದಿಸಿದ್ದು, ವಿಭಾಗೀಯ ಮಟ್ಟದ ಕ್ರೀಡಾಕೂಟದಲ್ಲೂ ಸಾಧನೆ ಮಾಡುವುದರ ಮೂಲಕ ತಾಲೂಕಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗುವಂತಾಗಲಿ ಎಂದು ಆಶಿಸಿದ್ದಾರೆ.