ಜಿಲ್ಲೆ

ರಾಮಾಪುರ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ

ಕಿರಣ್ ಮಾದರಹಳ್ಳಿ

ಹನೂರು: ತಾಲೂಕಿನ ರಾಮಾಪುರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಶಾಸಕ ಎಂ.ಆರ್ ಮಂಜುನಾಥ್ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿ, ಜಿಲ್ಲೆಯಲ್ಲಿಯೇ ಹನೂರು ವಿಧಾನಸಭಾ ಕ್ಷೇತ್ರ ಹೆಚ್ಚು ವಿಸ್ತೀರ್ಣ ಹೊಂದಿದ್ದು, ಅದರಲ್ಲೂ ರಾಮಾಪುರ ಹೋಬಳಿ ವ್ಯಾಪ್ತಿಯಲ್ಲಿ ಬಹುತೇಕ ಗ್ರಾಮಗಳು ಕಾಡಂಚಿನಲ್ಲಿವೆ. ಆದರೆ ಇಲ್ಲಿನ ಆಸ್ಪತ್ರೆಯಿಂದ ಸರಿಯಾದ ಚಿಕಿತ್ಸೆ ದೊರಕುತ್ತಿಲ್ಲ. ಇದರಿಂದ ತುಂಬಾ ಸಮಸ್ಯೆ ಎದುರಿಸುತ್ತಿದ್ದೇವೆ. ಆದ್ದರಿಂದ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಈ ಭಾಗದ ಜನರು ಒತ್ತಾಯಿಸಿದ್ದರು.

ಈ ಹಿನ್ನೆಲೆ ಅಗತ್ಯ ಕ್ರಮ ವಹಿಸಿದ ಪರಿಣಾಮ ಈ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಆದೇಶ ಹೊರಡಿಸಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಅಗತ್ಯ ವೈದ್ಯರು, ಸಿಬ್ಬಂದಿ ನಿಯೋಜಿಸಲಾಗುವುದು. ಇದರಿಂದ ಮುಂದಿನ ದಿನಗಳಲ್ಲಿ ಉತ್ತಮ ಆರೋಗ್ಯ ಸೇವೆ ದೊರಕಲಿದೆ. ರಾಮಾಪುರದಲ್ಲಿ ಡಯಾಲಿಸಿಸ್ ಕೇಂದ್ರ ಇಲ್ಲದ ಪರಿಣಾಮ ಈ ಭಾಗದಲ್ಲಿ ಕಿಡ್ನಿ ಸಮಸ್ಯೆಯುಳ್ಳವರು ಅಗತ್ಯ ಚಿಕಿತ್ಸೆಗಾಗಿ ಕೊಳ್ಳೇಗಾಲ, ಮೈಸೂರು ಹಾಗೂ ಇನ್ನಿತರೆಡೆಗೆ ಅಲೆಯುವಂತಾಗಿತ್ತು. ಇದರಿಂದ ರೋಗಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು ರಾಮಾಪುರ ಸರ್ಕಾರಿ ಆಸ್ಪತ್ರೆಯಲ್ಲಿಯೇ ಡಯಾಲಿಸಿಸ್ ಕೇಂದ್ರ ತೆರೆಯಲಾಗಿದೆ. ರೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

ಬಳಿಕ ಡಯಾಲಿಸಿಸ್ ಕೇಂದ್ರವನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದಕ್ಕೂ ಮುನ್ನ 108 ತುರ್ತು ವಾಹನದ ಸೇವೆಗೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಡಿಎಚ್‌ಒ ಡಾ. ಚಿದಂಬರಂ, ಉಪವಿಭಾಗಾಧಿಕಾರಿ ಮಹೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ಗ್ರಾಪಂ ಅಧ್ಯಕ್ಷ ರವಿ ಇತರರು ಇದ್ದರು.