ಹನೂರು: ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಶ್ರೀಧರ್ ತಿಳಿಸಿದರು.
ತಾಲೂಕಿನ ರಾಮಾಪುರ ಗ್ರಾಮದ ಜೆಎಸ್‌ಎಸ್ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಳ್ಳೇಗಾಲ ಕಾನೂನು ಸೇವಾ ಸಮಿತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ಆದರೆ, ಕೆಲವು ಪಾಲಕರು ಸಂಪ್ರದಾಯ ಹಾಗೂ ಮೌಢ್ಯಕ್ಕೆ ಜೋತು ಬಿದ್ದು ಮಕ್ಕಳನ್ನು ಬಾಲ್ಯ ವಿವಾಹಕ್ಕೆ ಒಳಪಡಿಸುತ್ತಿದ್ದಾರೆ. ಇದು ಹನೂರು ತಾಲೂಕಿನಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದು ದುರಾದೃಷ್ಟಕರ. ಕೋವಿಡ್ ಅಂತ್ಯದ ವೇಳೆ ಬಾಂಗ್ಲದೇಶ ಬಾಲ್ಯ ವಿವಾಹದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಭಾರತ 2ನೇ ಸ್ಥಾನದಲ್ಲಿತ್ತು. ಇದರಲ್ಲಿ ಚಾಮರಾಜನಗರದಲ್ಲಿ ಗರಿಷ್ಠ ಪ್ರಮಾಣದಲ್ಲಿ ಪ್ರಕರಣಗಳು ನಡೆದಿವೆ. ಈ ದಿಸೆಯಲ್ಲಿ ಬಾಲ್ಯ ವಿವಾಹವನ್ನು ತಡೆಗಟ್ಟಬೇಕಿರುವುದು ಅತೀ ಮುಖ್ಯವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಈ ಬಗ್ಗೆ ಮನದಟ್ಟು ಮಾಡಿಕೊಂಡು ಪಾಲಕರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ. ಬಾಲ್ಯ ವಿವಾಹ ಹಾಗೂ ಮಕ್ಕಳ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತಿರುವುದು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098 ಕರೆ ಮಾಡಿ ಮಾಹಿತಿ ತಿಳಿಸಬಹುದಾಗಿದೆ. ಇದರಿಂದ ಶೋಷಣೆಗೆ ಒಳಗಾದವರನ್ನು ರಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ಕೆಲವರು ಕಾನೂನು ಬಾಹಿರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು, ಅಕ್ರಮವಾಗಿ ಮಾದಕ ವಸ್ತುಗಳ ಸಾಗಣೆ, ಶಸ್ತ್ರಾಸ್ತ್ರಗಳ ಸಾಗಣೆ ಹಾಗೂ ಮಾನವ ಕಳ್ಳತನ ಸಾಗಣೆಯಲ್ಲಿ ತೊಡಗಿದ್ದು, ಇದರಲ್ಲಿ ಮಕ್ಕಳು ಹಾಗೂ ಮಹಿಳೆಯರನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವರನ್ನು ಭಿಕ್ಷಾಟನೆ, ವೇಶ್ಯಾವಾಟಿಕೆ, ಕಾರ್ಖಾನೆ ಕೆಲಸಕ್ಕೆ ಹಾಗೂ ಜೀತ ಪದ್ಧತಿಗೆ ದೂಡುತ್ತಿದ್ದಾರೆ. ಇದರಿಂದ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತಿದ್ದು, ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಬಗ್ಗೆ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳು, ಪಾಲಕರು ಸೇರಿದಂತೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು.
ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್ ಮಾತನಾಡಿ, ತಾಲೂಕಿನ ರಾಮಾಪುರ, ಹನೂರು ಹಾಗೂ ಮಲೆಮಹದೇಶ್ವರ ಬೆಟ್ಟದ ಭಾಗದಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇಂದಿಗೂ ಕದ್ದುಮುಚ್ಚಿ ಬಾಲ್ಯ ವಿವಾಹ ನಡೆಯುತ್ತಿವೆೆ. ಪರಿಣಾಮ ಮಕ್ಕಳು ಬಲಿಪಶುಗಳಾಗುತ್ತಿದ್ದು, ಜೀವನ ಹಾಳಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಈ ಬಗ್ಗೆ ಮನದಟ್ಟು ಮಾಡಿಕೊಂಡು ಪ್ರೀತಿ, ಪ್ರೇಮದ ಬಗ್ಗೆ ಆಲೋಚಿಸದೆ ಓದಿನ ಕಡೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಗ್ರಾಮದ ಬಸ್ ನಿಲ್ದಾಣದಿಂದ ಮುಖ್ಯ ರಸ್ತೆ ಮೂಲಕ ವಿದ್ಯಾರ್ಥಿಗಳೊಂದಿಗೆ ಅಧಿಕಾರಿಗಳು ಬಾಲ್ಯವಿವಾಹದ ನಿಷೇಧದ ಬಗ್ಗೆ ಘೋಷಣೆ ಕೂಗುತ್ತಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಬಿಇಒ ಶಿವರಾಜು, ಶಿಕ್ಷಣ ಸಂಯೋಜಕ ಕಂದವೇಲು, ಸಿಆರ್‌ಪಿ ಮಹೇಶ್, ಮುಖ್ಯ ಶಿಕ್ಷಕರಾದ ನಟರಾಜು, ಶಾಂತಕುಮಾರಿ, ಶಾಂತಿ ಹಾಗೂ ಇತರರು ಇದ್ದರು.