ಜಿಲ್ಲೆ

ಲೊಕ್ಕನಹಳ್ಳಿ ಸಮೀಪ ರಸ್ತೆಗೆ ಬಿದ್ದ ಮರ

ಕಿರಣ್ ಮಾದರಹಳ್ಳಿ

ಹನೂರು: ತಾಲೂಕಿನ ಲೊಕ್ಕನಹಳ್ಳಿ ಸಮೀಪದ ಬೂದಿ ಪಡಗದ ಬಳಿ ಸೋಮವಾರ ರಾತ್ರಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡು, ಸಾರ್ವಜನಿಕರು ತೊಂದರೆ ಅನುಭವಿಸಿದರು.

ಹನೂರು- ಕೊಳ್ಳೇಗಾಲದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ಹೆದ್ದಾರಿಯಾದ ಬೂದಿಪಡಗದ ಬಳಿ ರಾತ್ರಿ 12 ಗಂಟೆ ವೇಳೆಯಲ್ಲಿ ಬೃಹತ್ ಗಾತ್ರದ ಮರ ಬಿದ್ದಿದೆ. ಪರಿಣಾಮ ಆಸುಪಾಸಿನಲ್ಲಿದ್ದ ವಿದ್ಯುತ್ ಕಂಬಗಳು ಬಾಗಿವೆ. ಕೆಲವು ತಂತಿಗಳು ರಸ್ತೆಯ ಮೇಲೆ ಬಿದ್ದಿವೆ. ಇದರಿಂದ ಬೆಳಗ್ಗೆ 9 ಗಂಟೆತನಕವೂ ಅಂತಾರಾಜ್ಯ ವಾಹನ ಸಂಚಾರ ಸ್ಥಗಿತಗೊಂಡಿತ್ತು. ವಾಹನಗಳು ರಸ್ತೆಯಲ್ಲೇ ಗಂಟೆಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಪರಿಣಾಮ ಪ್ರಯಾಣಿಕರು ತುಂಬಾ ತೊಂದರೆಪಟ್ಟರು. ಇತ್ತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲಾ, ಕಾಲೇಜುಗಳಿಗೆ ತೆರಳಲು ಪರದಾಡುವಂತಾಯಿತು. ಸುದ್ದಿ ತಿಳಿದು ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸೆಸ್ಕ್ ಸಿಬ್ಬಂದಿಯೂ ವಿದ್ಯುತ್ ಕಂಬಗಳನ್ನು ಸರಿಪಡಿಸಿದರು.

ತೀವ್ರ ಆಕ್ಷೇಪ: ರಸ್ತೆ ಬದಿಯಲ್ಲಿನ ಹಳೆಯ ಹಾಗೂ ಒಣಗಿದ ಮರಗಳನ್ನು ತೆರವುಗೊಳಿಸಬೇಕು. ಈ ಕಾರ್ಯ ಸೂಕ್ತ ಸಮಯಕ್ಕೆ ಇಲಾಖೆಗಳು ಮಾಡದಿದ್ದರೆ ಹೀಗೆ ಸಮಸ್ಯೆ ಎದುರಾಗುತ್ತದೆ ಎಂದು ಪ್ರಯಾಣಿಕರು ದೂರಿದರು. ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷೃ ವಹಿಸುವುದರಿಂದಲೇ ಈ ರೀತಿ ಪ್ರಯಾಣ ಸಮಯ ವಿಳಂಬವಾಗುತ್ತದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.