ಹನೂರು; ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ರಾಜಸ್ವ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಪಿ.ಮಾದೇಶ್ ಉಪ ತಹಸೀಲ್ದಾರ್ ಆಗಿ ಬಡ್ತಿ ಹೊಂದಿ ಯಳಂದೂರು ತಾಲೂಕಿನ ನಾಡ ಕಚೇರಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಭಾನುವಾರ ಕಂದಾಯ ಇಲಾಖೆ ವತಿಯಿಂದ ಮಾದೇಶ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಮಾತನಾಡಿ, ಮಾದೇಶ್ ಅವರು 8 ವರ್ಷಗಳ ಸೇವಾವಧಿಯಲ್ಲಿ ಸಾರ್ವಜನಿಕರೊಂದಿಗೆ ಉತ್ತಮ ಒಡನಾಟ ಹೊಂದುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿದ್ದರು. ಹಾಗೆಯೇ ಕಡತಗಳ ವಿಲೇವಾರಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಮೂಲಕ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಇವರ ಕಾರ್ಯ ಮೆಚ್ಚುವಂತದ್ದು ಎಂದರು.
ಗ್ರೇಡ್- 2 ತಹಸೀಲ್ದಾರ್ ಧನಂಜಯ, ಶಿರಸ್ತೇದಾರ್ ನಾಗೇಂದ್ರ, ಆರ್‌ಐ ಶಿವಕುಮಾರ್, ಗ್ರಾಮ ಆಡಳಿತಾಧಿಕಾರಿಗಳಾದ ಶೇಷಣ್ಣ, ವಾಸುದೇವ, ಲೋಕೇಶ್ ಇತರರು ಇದ್ದರು.