ಹನೂರು: ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹೊಸ ರೈಲ್ವೆ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರಿಗೆ ಹೊಸ ರೈಲ್ವೆ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.
ಚಿಕ್ಕಮಗಳೂರು, ಹಾಸನ ಹಾಗೂ ಬೇಲೂರು ಮಾರ್ಗದ ಹೊಸ ರೈಲ್ವೆ ಯೋಜನೆಯನ್ನು ಜಾರಿಗೊಳಿಸಲಾಗುವುದು. ಇದರಲ್ಲಿ ಈಗಾಗಲೇ ಚಿಕ್ಕಮಗಳೂರು ಹಾಗೂ ಬೇಲೂರು ಯೋಜನೆಗೆ 493 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇನ್ನು ಉಳಿದ ಯೋಜನೆಗಳು 2027 ರೊಳಗೆ ಪೂರ್ಣಗೊಳ್ಳಲಿವೆ ಎಂದು ತಿಳಿಸಿದರು.
ಕಥೆ ಮುಗೀತೂ ಅಂತಿದ್ರು
ನನ್ನ ಮನೆ ದೇವರು ಮಾದಪ್ಪನ ಮೇಲೆ ನನಗೆ ನಂಬಿಕೆ ಇದೆ. ಚಾ.ನಗರ ಹಾಗೂ ವರುಣದಲ್ಲಿ ಸೋತ ನಂತರ ಕೆಲವರು ಸೋಮಣ್ಣನ ಕಥೆ ಮುಗೀತು ಅಂತಾ ಹೇಳ್ತಿದ್ರು. ಆದರೆ ಮಾದಪ್ಪ ನನ್ನ ಕೈ ಬಿಡಲಿಲ್ಲ, ನಮ್ಮ ನಾಯಕರು ಕೈ ಬಿಡಲಿಲ್ಲ. ಹಾಗಾಗಿ ಒಳ್ಳೆಯತನಕ್ಕೆ, ಒಳ್ಳೆ ನಡವಳಿಕೆಗೆ ಹಾಗೂ ಕೆಲಸಗಾರನಿಗೆ ಭಗವಂತನ ಆಶೀರ್ವಾದ ಇರುವಾಗ ಹೆದರುವ ಅವಶ್ಯಕತೆ ಇಲ್ಲ ಎಂದರು.
ಬಿಜೆಪಿಯ 21 ಹಗರಣವನ್ನು ಬಯಲಿಗೆಳೆಯುತ್ತೇನೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಸಿದ್ದರಾಮಯ್ಯ ಅವರು ವಿಚಲಿತರಾಗಿದ್ದಾರೆ. ಮುಡಾ ಹಗರಣದಿಂದ ಅವರಿಗೆ ಈಗ ಮುಜುಗರ ಆಗಿದೆ. ಬಿಜೆಪಿ ಹಗರಣ ಏನಿದೆಯೋ ಅದನ್ನೆಲ್ಲ ಬಯಲಿಗೆ ಎಳೆಯಲಿ. ಹಾಗೆಯೇ ನಿಮ್ಮದೂ ಆಚೆ ಬರಲಿ. ನಿಮ್ಮ ಹಗರಣವನ್ನು ಮುಚ್ಚಿಕೊಳ್ಳುವ ಸಲುವಾಗಿ ಇನ್ನೊಬ್ಬರನ್ನು ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳಬೇಡಿ ಎಂದು ತಿರುಗೇಟು ನೀಡಿದರು.
ದೇಗುಲಕ್ಕೆ ಭೇಟಿ
ಇದಕ್ಕೂ ಮುನ್ನ ದೇಗುಲಕ್ಕೆ ಆಗಮಿಸಿದ ಸಚಿವರನ್ನು ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಹಾಗೂ ಅರ್ಚಕರು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ನಂತರ ಗಿರಿದರ್ಶಿನಿ ಅತಿಥಿಗೃಹದಲ್ಲಿ ಪ್ರಸಾದ ಸ್ವೀಕರಿಸಿದರು. ಈ ವೇಳೆ ಕಾರ್ಯದರ್ಶಿ ರಘು ಅವರಿಂದ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆದರಲ್ಲದೆ, ಕೈಗೊಂಡಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಭಕ್ತರಿಗೆ ಉತ್ತಮಸೌಕರ್ಯ ಕಲ್ಪಿಸುವಂತೆ ಸೂಚಿಸಿದರು. ಬಳಿಕ ರಾಷ್ಟ್ರಪತಿ ಭವನದ ಬಳಿ ಕಾರ್ಯಕರ್ತರು ಸೋಮಣ್ಣ ಅವರಿಂದಲೇ ಮಹಿಳೆಯರಿಗೆ ಸೀರೆ ಹಾಗೂ ಹೊದಿಕೆಯನ್ನು ಕೊಡಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಎಸ್ ದತ್ತೇಶ್‌ಕುಮಾರ್ ಇತರರು ಇದ್ದರು.