ಹನೂರು: ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ. ಗುಂಡಾಪುರ ಗ್ರಾಮದಲ್ಲಿ ನಕಲಿ ಕೀ ಬಳಸಿ ಬೈಕ್ ಕಳವು ಮಾಡಲು ಯತ್ನಿಸುತ್ತಿದ್ದ ವೇಳೆ ಬಂಧಿತನಾದ ವ್ಯಕ್ತಿಯಿಂದ ಸಹೋದರ ಸಹ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಜು.11 ರಂದು ಬೆಳಗ್ಗೆ 11ರ ವೇಳೆಯಲ್ಲಿ ನಾಗಮಲ್ಲು ಎಂಬುವರು ಗ್ರಾಮದ ಮುಖ್ಯ ರಸ್ತೆಯ ಬದಿಯಲ್ಲಿ ಬೈಕ್ ನಿಲ್ಲಿಸಿದ್ದರು. ಈ ವೇಳೆ ಮೈಸೂರಿನ ಬೋಗಾದಿಯ ಗಿರೀಶ್ ಎಂಬಾತ ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡಲು ಯತ್ನಿಸುತ್ತಿದ್ದ. ಇದನ್ನು ಗಮನಿಸಿದ ನಾಗಮಲ್ಲು ಸ್ಥಳೀಯರ ಜತೆಗೂಡಿ ಆತನನ್ನು ಹಿಂಬಾಲಿಸಿ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದರು.
ಅಪರಾಧ ವಿಭಾಗದ ಎಸ್‌ಐ ಲೋಕೇಶ್ ಹಾಗೂ ಸಿಬ್ಬಂದಿ ವಿಚಾರಣೆಗೆ ಒಳಪಡಿಸಿದಾಗ ಸಹೋದರ ನಂದೀಶ್ ಸಹ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಮ.ಬೆಟ್ಟದಲ್ಲೂ ಬೈಕ್ ಕಳ್ಳತನ ಮಾಡಲಾಗಿದೆ ಎಂದು ತಪ್ಪೊಪ್ಪಿಕೊಂಡನು. ಅಲ್ಲದೆ ಮೈಸೂರು ಹಾಗೂ ಇನ್ನಿತರ ಕಡೆಗಳಲ್ಲೂ ಬೈಕ್ ಕಳ್ಳತನ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಬಳಿಕ ನಂದೀಶನನ್ನು ಸಹ ಬಂಧಿಸಿದ ಪೊಲೀಸರು ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.